ನ್ಯೂಸ್

ಭರ್ಜರಿ ಪ್ರದರ್ಶನದ ಬೆನ್ನಲ್ಲೇ ಪ್ರೇಕ್ಷಕರಿಗೆ 'ಬೈ 1 ಗೆಟ್​ 1' ಆಫರ್​ ಘೋಷಿಸಿದ 'ಬಾಯ್ಸ್​ ಹಾಸ್ಟೆಲ್'​ ನಿರ್ಮಾಪಕ!

ಆಂಧ್ರಪ್ರದೇಶ: ಸ್ಯಾಂಡಲ್​ವುಡ್​ ಅಂಗಳದಲ್ಲಿ ಬಿಡುಗಡೆಗೊಂಡ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವುದರ ಜತೆಗೆ ಕರ್ನಾಟಕದ ಬಾಕ್ಸ್​ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿತು. ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಸೈ ಎನ್ನಿಸಿಕೊಂಡ ನಿತಿನ್ ಕೃಷ್ಣಮೂರ್ತಿ ಅವರ ಸಿನಿಮಾ ಇದೀಗ ಟಾಲಿವುಡ್​ನಲ್ಲೂ ಭರ್ಜರಿ ಸದ್ದು ಮಾಡುತ್ತಿದೆ.

ಕಾಮಿಡಿ-ಡ್ರಾಮಾ ಜಾನರ್​ನಲ್ಲಿ ಮೂಡಿಬಂದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಕನ್ನಡ ಸಿನಿಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಯಿತು. ಸದ್ಯ ಈ ಚಿತ್ರ ತೆಲುಗು ಭಾಷೆಗೆ ಡಬ್​ ಆಗಿದ್ದು, 'ಬಾಯ್ಸ್​ ಹಾಸ್ಟೆಲ್'​ ಎಂಬ ಶೀರ್ಷಿಕೆಯಲ್ಲಿ ಕಳೆದ ವಾರ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ತೆಲುಗು ಪ್ರೇಕ್ಷಕರಿಂದಲೂ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಬಾಯ್ಸ್ ಹಾಸ್ಟೆಲ್​ ಚಿತ್ರಕ್ಕೆ ತೆಲುಗು ಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡುತ್ತಿದ್ದಂತೆ ಸಂತಸಪಟ್ಟ ಚಿತ್ರದ ನಿರ್ಮಾಪಕ, ನಾಳೆ (ಆಗಸ್ಟ್​ 30) ತೆಲುಗು ರಾಜ್ಯಾದ್ಯಂತ 1+1 ಟಿಕೆಟ್ ಆಫರ್ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಆಫರ್ ಕುರಿತು ಹೆಚ್ಚಿನ ವಿವರಗಳನ್ನು ಅಧಿಕೃತ ಪ್ರಕಟಣೆಯಲ್ಲಿ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಅತೀ ಮುಖ್ಯವಾಗಿ ಸಿನಿಮಾ ನೋಡಲು ಬರುವ ಪ್ರೇಕ್ಷಕರ ಪೈಕಿ ಯಾರಿಗಾದರೂ ಚಿತ್ರ ತೃಪ್ತಿ ನೀಡಲಿಲ್ಲ ಎಂದರೆ ಟಿಕೆಟ್ ಮೊತ್ತವನ್ನು ಹಿಂದಿರುಗಿಸುವುದಾಗಿ ನಿರ್ಮಾಪಕ ಶರತ್ ಹೇಳಿದ್ದಾರೆ,(ಏಜೆನ್ಸೀಸ್).