ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಪಕ್ಷದ ಶಾಸಕರಿಗೆ ಬಿಜೆಪಿಗೆ ಸೇರುವಂತೆ ಹಣದ ಆಮಿಷವೊಡ್ಡಿದ ಪ್ರಕರಣ ಸಂಬಂಧ ವಿಚಾರಣೆಗೆ ಗೈರಾದ 'ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಬಿ.ಎಲ್.ಸಂತೋಷ್ ಸೇರಿ ಮೂವರಿಗೆ ತೆಲಂಗಾಣ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ಲುಕ್‌ಔಟ್ ಜಾರಿ ಮಾಡಿದೆ.
ಶಾಸಕರಿಗೆ ಹಣದ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ.21ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಬಿ.ಎಲ್.ಸಂತೋಷ್ಗೆ ನ.19ರಂದೇ ಎಸ್‌ಐಟಿ ಸಮನ್ಸ್ ಜಾರಿ ಮಾಡಿತ್ತು. ವಿಚಾರಣೆಗೆ ಗೈರಾದರೆ ಬಂಧನದ ಎಚ್ಚರಿಕೆಯನ್ನೂ ಕೊಟ್ಟಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್, ಸಂತೋಷ್ ಅವರಿಗೆ ನೋಟಿಸಿನ ಪ್ರತಿ ಸಿಗುವವರೆಗೂ ಯಾವುದೇ ಕ್ರಮ ಕೈಗೊಳ್ಳಬಾರದು. ದೆಹಲಿ ಪೊಲೀಸರ ನೆರವಿನೊಂದಿಗೆ ಸಂತೋಷ್ಗೆ ನೋಟಿಸ್ ತಲುಪಿಸಬೇಕು ಎಂದು ಆದೇಶಿಸಿತ್ತು. ಆದರೆ, ವಿಚಾರಣೆಗೆ ನಿನ್ನೆ ಸಂತೋಷ್ ಗೈರಾಗಿದ್ದು, ಸಂತೋಷ್, ತುಷಾರ್, ಜಗ್ಗು ಸ್ವಾಮಿ ವಿರುದ್ಧ ಎಸ್‌ಐಟಿ ಲುಕ್‌ಔಟ್ ಜಾರಿ ಮಾಡಿದೆ.
ತೆಲಂಗಾಣದ ಸೈಬರಾಬಾದ್ ಪೊಲೀಸರು ಅ.26ರಂದು ಅಜೀಜ್‌ನಗರದ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದ್ದಾಗ 15 ಕೋಟಿ ರೂ. ಪತ್ತೆಯಾಗಿತ್ತು. ಅದನ್ನು ವಶಪಡಿಸಿಕೊಂಡು, ಮೂವರನ್ನು ಬಂಧಿಸಲಾಗಿತ್ತು. ಟಿಆರ್‌ಎಸ್‌ನ ನಾಲ್ವರು ಶಾಸಕರ ಖರೀದಿಗೆ ಈ ಹಣ ತರಲಾಗಿತ್ತು ಎಂಬ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೇ ಪ್ರಕರಣ ಸಂಬಂಧ ಈಗ ಸಮನ್ಸ್ ಜಾರಿ ಮಾಡಲಾಗಿದೆ.