ನ್ಯೂಸ್

ಭಾರಿ ಮಳೆಗೆ ನಿರ್ಮಾಣ ಹಂತದ ಗೋಡೆ ಕುಸಿತ: 4 ವರ್ಷದ ಮಗು ಸೇರಿ 7 ಮಂದಿ ದುರ್ಮರಣ

ಹೈದರಾಬಾದ್​: ನಿನ್ನೆ (ಮೇ 07) ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹೈದರಾಬಾದ್‌ನ ಬಾಚುಪಲ್ಲಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು 4 ವರ್ಷದ ಮಗು ಸೇರಿದಂತೆ ಏಳು ಮಂದಿ ದುರಂತ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಈ ಘಟನೆ ರೇಣುಕಾ ಎಲ್ಲಮ್ಮ ಕಾಲನಿಯಲ್ಲಿ ನಡೆದಿದೆ. ಅಪಾರ್ಟ್​ಮೆಂಟ್​ನ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು ತಾತ್ಕಾಲಿಕ ಶೆಡ್​ನಲ್ಲಿ ವಾಸಿಸುತ್ತಿದ್ದರು. ಭಾರಿ ಮಳೆಗೆ ನಿರ್ಮಾಣ ಹಂತದಲ್ಲಿದ್ದ ಗೋಡೆ, ಶೆಡ್​ ಮೇಲೆ ಕುಸಿದು ಅವಘಡ ಸಂಭವಿಸಿದೆ. ಇದರಿಂದ ಮಗು ಸೇರಿದಂತೆ ಶೆಡ್​ನಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಜಿಎಚ್‌ಎಂಸಿ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದರು. ಜೆಸಿಬಿಗಳ ಸಹಾಯದಿಂದ ಮೃತದೇಹಗಳನ್ನು ಹೊರ ತೆಗೆಯಲಾಯಿತು.

ಮೃತರನ್ನು ರಾಜು (25), ರಾಮ್ ಯಾದವ್ (34), ಗೀತಾ (32), ಹಿಮಾಂಶು (4), ಖುಷಿ, ತಿರುಪತಿ ರಾವ್ (20) ಮತ್ತು ಶಂಕರ್ (22) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಒಡಿಶಾ ಮತ್ತು ಛತ್ತೀಸ್‌ಗಢದಿಂದ ಉದ್ಯೋಗಕ್ಕಾಗಿ ಹೈದರಾಬಾದ್​ಗೆ ಬಂದಿದ್ದರು ಎಂದು ತಿಳಿದುಬಂದಿದೆ.

ರೈಸ್ ಡೆವಲಪರ್ಸ್ ನಿರ್ಮಾಣದ ಆವರಣದಲ್ಲಿ ಈ ಘಟನೆ ನಡೆದಿದೆ. ಅಪಘಾತದ ವಿಷಯ ತಿಳಿದ ಕುಕ್ಕಟಪಲ್ಲಿ ಎಸಿಪಿ ಶ್ರೀನಿವಾಸ ರಾವ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಂದಹಾಗೆ ಮಂಗಳವಾರ ತೆಲಂಗಾಣದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿದಿದ್ದು, ಕೆಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹೈದರಾಬಾದ್​ ನಗರದ ಹಲವೆಡೆ ಜಲಾವೃತಗೊಂಡು ಸಂಚಾರ ದಟ್ಟಣೆ ಉಂಟಾಗಿದೆ. ಮಳೆ ಮತ್ತು ಗುಡುಗು ಸಹಿತ ಮಳೆಯಿಂದಾಗಿ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದು, ಮರಗಳು ಧರೆಗುರುಳಿವೆ. ತೆಲಂಗಾಣ ರಾಜ್ಯ ಅಭಿವೃದ್ಧಿ ಯೋಜನಾ ಸೊಸೈಟಿಯ ಪ್ರಕಾರ, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್‌ಎಂಸಿ) ಕೇಂದ್ರ ಕಚೇರಿಯ ಸ್ಥಳದಲ್ಲಿ ಮಂಗಳವಾರ ಸಂಜೆ 6 ಗಂಟೆಗೆ 84.5 ಮಿಮೀ ಮಳೆಯಾಗಿದೆ. (ಏಜೆನ್ಸೀಸ್​)