ನ್ಯೂಸ್

ದೇಶ ಸೇವೆ ಮಾಡುವ ಆಸೆಯಿಂದ ಸೇನೆಗೆ ಸೇರಿದ್ದ ಯುವತಿ ದುರ್ಮರಣ! ಗಣೇಶ ಹಬ್ಬದಂದೇ ಸಾವಿಗೆ ಶರಣು

ಹೈದರಾಬಾದ್​: ದೇಶದ ಜನರೆಲ್ಲ ನೆಮ್ಮದಿಯಿಂದ ನಿದ್ರಿಸುತ್ತಿದ್ದರೆ ಅದಕ್ಕೆ ಕಾರಣ ಸೈನಿಕರು. ಗಡಿಯಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಾ ಶತ್ರುಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ದೇಶಕ್ಕಾಗಿ ತಮ್ಮ ಕುಟುಂಬ ಸದಸ್ಯರು, ಒಡಹುಟ್ಟಿದವರು, ಸಂಗಾತಿ, ಮಕ್ಕಳು ಮತ್ತು ಮನೆಯನ್ನು ಬಿಟ್ಟು ಹಗಲು-ರಾತ್ರಿ ಎನ್ನದೇ ಬಿಸಿಲು, ಮಳೆ, ಚಳಿಯನ್ನ ಲೆಕ್ಕಿಸದೇ ಶ್ರಮಿಸುತ್ತಾರೆ. ಸಾಯುತ್ತೇವೆ ಎಂದು ಗೊತ್ತಿದ್ದರೂ ದೇಶ ಸೇವೆ ಮಾಡುವ ಉದ್ದೇಶದಿಂದ ಅನೇಕ ತ್ಯಾಗಗಳನ್ನು ಮಾಡುತ್ತಾರೆ.

ಇತ್ತೀಚೆಗಷ್ಟೇ ದೇಶ ಸೇವೆ ಮಾಡುವ ಉದ್ದೇಶದಿಂದ ಸೇನೆಗೆ ಸೇರಿದ್ದ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಮೃತ ಯೋಧೆಯನ್ನು ಬಲ್ಲಾ ಗಂಗಾಭವಾನಿ ಎಂದು ಗುರುತಿಸಲಾಗಿದೆ. ಶನಿವಾರ (ಸೆ.07) ರಾತ್ರಿ ಗುಜರಾತಿನ ಗಡಿಯಲ್ಲಿ ಮೃತಪಟ್ಟಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಆಕೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತ ಭವಾನಿ ತೆಲಂಗಾಣದ ಎನ್‌ಟಿಪಿಸಿ ಸುಭಾಷ್ ನಗರದ ನಿವಾಸಿ. ಗುಜರಾತಿನ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಬ್ಯಾರಕ್​ನಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆರು ಗಂಟೆಗಳ ಕರ್ತವ್ಯವನ್ನು ನಿರ್ವಹಿಸಿದ ನಂತರ ವಿಶ್ರಾಂತಿ ಅವಧಿಯಲ್ಲಿ ದುಡುಕಿನ ಹೆಜ್ಜೆ ಇಟ್ಟಿದ್ದಾರೆ. ಆಕೆಯ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ದೇಶ ಸೇವೆ ಮಾಡುವ ಇಚ್ಛಾಶಕ್ತಿಯಿಂದ ಸೇನೆಗೆ ಸೇರಿದ ಗಂಗಾಭವಾನಿ ಮೃತಪಟ್ಟಿರುವುದು ಕುಟುಂಬಕ್ಕೆ ಭಾರಿ ನೋವಿನ ಸಂಗತಿಯಾಗಿದೆ.

ಗಂಗಾ ಭವಾನಿ ಸಾವಿನ ಸುದ್ದಿ ಕೇಳಿ ಅವರ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಹೈದರಾಬಾದ್ ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಯೋಧೆಯ ಪಾರ್ಥಿವ ಶರೀರ ಆಗಮಿಸಲಿದ್ದು, ಅಧಿಕಾರಿಗಳು ಆಕೆಯ ಮೃತ ದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಿದ್ದಾರೆ. (ಏಜೆನ್ಸೀಸ್​)