ಹೈದರಾಬಾದ್: ರಂಜಾನ್ (Ramzan) ಸಮಯದಲ್ಲಿ ಮುಸ್ಲಿಂ ನೌಕರರಿಗೆ ಕಚೇರಿಯಿಂದ ಬೇಗನ ಹೊರಡಲು ಅವಕಾಶ ನೀಡಿ ತೆಲಂಗಾಣ ಸರ್ಕಾರ ಅದೇಶ ಹೊರಡಿಸಿದೆ. ಮಾರ್ಚ್ 02ರಿಂದ ಈ ಆದೇಶ ಜಾರಿಗೆ ಬರಲಿದ್ದು, ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರದ ಈ ನಡೆ ವಿವಾದದ ಸ್ವರೂಪ ಪಡೆದುಕೊಂಡಿದೆ.
ಅದರಂತೆ ತೆಲಂಗಾಣ ಸರ್ಕಾರವು ರಂಜಾನ್ (Ramzan) ಸಮಯದಲ್ಲಿ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿನ ಮುಸ್ಲಿಂ ಉದ್ಯೋಗಿಗಳು 1 ಗಂಟೆ ಮುಂಚಿತವಾಗಿ ಕಚೇರಿ ಬಿಡಲು ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತೆಲಂಗಾಣ ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಮುಸ್ಲಿಂ ಸರ್ಕಾರಿ ನೌಕರರು/ ಶಿಕ್ಷಕರು/ ಗುತ್ತಿಗೆ/ ಹೊರಗುತ್ತಿಗೆ/ ಮಂಡಳಿಗಳು/ ನಿಗಮಗಳು ಮತ್ತು ಸಾರ್ವಜನಿಕ ವಲಯದ ನೌಕರರು ಸಂಜೆ 4 ಗಂಟೆಗೆ ತಮ್ಮ ಕಚೇರಿಗಳು ಅಥವಾ ಶಾಲೆಗಳನ್ನು ಬಿಡಲು ಸರ್ಕಾರ ಅನುಮತಿ ನೀಡಿದೆ. “ರಂಜಾನ್” (Ramzan) ಪವಿತ್ರ ಮಾಸದಲ್ಲಿ ಅಂದರೆ ಮಾರ್ಚ್ 2ರಿಂದ 31ರವರೆಗೆ ಅಗತ್ಯ ಪ್ರಾರ್ಥನೆಗಳನ್ನು ಸಲ್ಲಿಸಲು 1 ಗಂಟೆ ಮುಂಚಿತವಾಗಿ ತೆರಳಲು ಅವಕಾಶ ನೀಡಲಾಗಿದೆ. ಆದರೆ, ತುರ್ತು ಸಂದರ್ಭದಲ್ಲಿ ಅವರು ನಿಗದಿತ ಅವಧಿಯವರೆಗೆ ಸೇವೆ ಸಲ್ಲಿಸಬೇಕಾಗುತ್ತದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಇದು ಮುಸ್ಲಿಮರನ್ನು ಸಮಾಧಾನಗೊಳಿಸುವ ತಂತ್ರ ಎಂದು ಕಿಡಿಕಾರಿದೆ. ಕಾಂಗ್ರೆಸ್ ಪಕ್ಷವು ಕೇವಲ ಮುಸ್ಲಿಂ ಮತಗಳನ್ನು ಅವಲಂಬಿಸಿ ಅಧಿಕಾರವನ್ನು ಗಳಿಸಿದೆ ಮತ್ತು ಇಂತಹ ಕ್ರಮಗಳು ತುಷ್ಟೀಕರಣದ ರಾಜಕೀಯದ ಉತ್ತುಂಗವನ್ನು ಪ್ರತಿನಿಧಿಸುತ್ತದೆ. ಈ ನಿರ್ಧಾರವು ಧಾರ್ಮಿಕ ವಿಭಜನೆಗಳನ್ನು ಗಾಢಗೊಳಿಸುತ್ತದೆ ಎಂದು ಬಿಜೆಪಿ ಶಾಸಕ ರಾಜಾ ಸಿಂಗ್ ವಾಗ್ದಾಳಿ ನಡೆಸಿದ್ಧಾರೆ.