ನ್ಯೂಸ್

ರಾಜಕಾರಣಿಗಳ ಬೆನ್ನುಹತ್ತಿದ ಕರೊನಾ: ತೆಲಂಗಾಣದ ಉಪಸಭಾಪತಿ ಆಸ್ಪತ್ರೆಗೆ

ಹೈದರಾಬಾದ್: ಕರೊನಾ ಸೋಂಕು ಇದಾಗಲೇ ಹಲವಾರು ರಾಜಕಾರಣಿಗಳ ದೇಹವನ್ನು ಒಕ್ಕರಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿಬಿಟ್ಟಿದೆ. ರಾಜಕಾರಣಿಗಳು ಸೇರಿದಂತೆ ಅವರ ಕುಟುಂಬಸ್ಥರನ್ನೂ ಬಿಟ್ಟೂ ಬಿಡದೆ ಕಾಡತೊಡಗಿದೆ.

ಇದೀಗ ತೆಲಂಗಾಣ ವಿಧಾನಸಭೆ ಉಪ ಸಭಾಪತಿ ಟಿ. ಪದ್ಮರಾವ್ ಅವರಿಗೆ ಕರೊನಾ ಸೋಂಕು ಬಾಧಿಸಿದೆ.

ಇವರಿಗೆ ಸೋಂಕು ಬಾಧಿಸುತ್ತಿದ್ದಂತೆಯೇ ಕುಟುಂಬಸ್ಥರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೆಲಂಗಾಣದ ಗೃಹ ಸಚಿವರಿಗೆ ಭಾನುವಾರ ರಾತ್ರಿ ಸೋಂಕು ತಗುಲಿರುವುದು ಖಚಿತವಾಗಿತ್ತು. ಇದರ ಬೆನ್ನಲ್ಲೇ ಇದೀಗ ಉಪಸಭಾಪತಿಯರಿಗೂ ಸೋಂಕು ದೃಢಪಟ್ಟಿದೆ.

ಸಿಂಕರಾಬಾದ್ ಕ್ಷೇತ್ರದ ಶಾಸಕರಾದ ಟಿ. ಪದ್ಮರಾವ್ ಮತ್ತು ಅವರ ಕುಟುಂಬ ಸದಸ್ಯರು ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಇವರ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ‌ಗೆ ಒಳಪಡಿಸಲಾಗಿದೆ.

ಇವರು ಕೆಲ ದಿನಗಳಿಂದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸೋಂಕು ಬಾಧಿಸಿರಬಹುದು ಎನ್ನಲಾಗಿದೆ. ಇದು ಒಂದೆಡೆಯಾದರೆ, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೂ ಈಗ ಭೀತಿ ಶುರುವಾಗಿದೆ. ಸೋಮವಾರ ಒಂದೇ ದಿನ ತೆಲಂಗಾಣ ರಾಜ್ಯದಲ್ಲಿ 975 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ತೆಲಂಗಾಣದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,394.