ನ್ಯೂಸ್

ಕಳುವಾದ ಮೊಬೈಲ್​ ಪತ್ತೆಹಚ್ಚುವಲ್ಲಿ ತೆಲಂಗಾಣ ಪೊಲೀಸರಿಗೆ ಮೊದಲ ಸ್ಥಾನ: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ಹೈದರಾಬಾದ್​: ಕಳೆದ ಹೋದ ಅಥವಾ ಕಳುವಾದ ಮೊಬೈಲ್​ಗಳನ್ನು ಪತ್ತೆಹಚ್ಚಿ ಕಳೆದುಕೊಂಡವರಿಗೆ ಮರಳಿ ತಲುಪಿಸುವಲ್ಲಿ ತೆಲಂಗಾಣ ಪೊಲೀಸರು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಕರ್ನಾಟಕ ಪೊಲೀಸರಿದ್ದಾರೆ.​

ತೆಲಂಗಾಣ ಪೊಲೀಸರು ಕಳೆದ 190 ದಿನಗಳಲ್ಲಿ 10,018 ಫೋನ್​ಗಳನ್ನು ಮರು ವಶಪಡಿಸಿಕೊಂಡಿದ್ದಾರೆ. ಕಳ್ಳರು ಸಾಮಾನ್ಯವಾಗಿ ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪರ್ಸ್ ಮತ್ತು ಸೆಲ್​ಫೋನ್​​ಗಳನ್ನು ಕದಿಯುತ್ತಾರೆ. ಆದಾಗ್ಯೂ, ಕಳೆದುಹೋದ ಪರ್ಸ್​ ಮತ್ತು ಅದರಲ್ಲಿರುವ ಹಣವು ಮರಳಿ ಸಿಗುವುದಿಲ್ಲ. ಆದರೆ, ಫೋನ್​ ವಿಚಾರದಲ್ಲಿ ಆ ರೀತಿ ಆಗುವುದಿಲ್ಲ. ಏಕೆಂದರೆ, ಕಳೆದುಹೋದ ಮೊಬೈಲ್​ ಫೋನ್​ಗಳನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ಕಡಿಮೆ ಸಮಯದಲ್ಲಿ ಪತ್ತೆಹಚ್ಚಬಹುದು. ಇದೀಗ ಅದೇ ತಂತ್ರಜ್ಞಾನವನ್ನು ಬಳಸಿ ತೆಲಂಗಾಣ ಪೊಲೀಸರು ಕಳೆದು ಹೋದ ಫೋನ್​ಗಳನ್ನು ವಾಪಸ್ ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.

ಸೆಂಟ್ರಲ್ ಇಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಪೋರ್ಟಲ್ ಮೂಲಕ ಕಳೆದುಹೋದ ಮತ್ತು ಕದ್ದ ಸೆಲ್ ಫೋನ್‌ಗಳನ್ನು ಮರುಪಡೆಯುವಲ್ಲಿ ತೆಲಂಗಾಣ ರಾಜ್ಯವು ದೇಶದ ಎಲ್ಲಾ ರಾಜ್ಯಗಳಿಗಿಂತ ಅಗ್ರಸ್ಥಾನದಲ್ಲಿದೆ. ಸಿಇಐಆರ್​ ಡೇಟಾ ಪ್ರಕಾರ, ತೆಲಂಗಾಣ ಪೊಲೀಸರು ತೆಲಂಗಾಣದಲ್ಲಿ 39 ಪ್ರತಿಶತ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯ ನೇತೃತ್ವವನ್ನು ಸಿಐಡಿ ಹೆಚ್ಚುವರಿ ಡಿಜಿ ಮಹೇಶ್ ಭಾಗವತ್ ಅವರು ವಹಿಸಿಕೊಂಡಿದ್ದಾರೆ. ಇದೀಗ ರಾಜ್ಯ ನಂಬರ್​ 1 ಸ್ಥಾನದಲ್ಲಿ ಇರುವುದರಿಂದ ತೆಲಂಗಾಣ ಡಿಜಿಪಿ ಅಂಜನ್ ಕುಮಾರ್ ಯಾದವ್ ಅವರು ಪೊಲೀಸ್ ತಂಡವನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ. ಪೊಲೀಸರು 190 ದಿನಗಳಲ್ಲಿ 10,018 ಸ್ಮಾರ್ಟ್ ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಕಳೆದ 14 ದಿನಗಳಲ್ಲಿ 1000 ಸ್ಮಾರ್ಟ್ ಫೋನ್​ಗಳನ್ನು ಮಾಲೀಕರಿಗೆ ನೀಡಲಾಗಿದೆ.

ಕರ್ನಾಟಕಕ್ಕೆ 2ನೇ ಸ್ಥಾನ

ತೆಲಂಗಾಣ ನಂತರ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ತೆಲಂಗಾಣ ಶೇ. 39 ರಿಕವರಿ ರೇಟಿಂಗ್​ ಹೊಂದಿದ್ದರೆ, ಕರ್ನಾಟಕ 36 ರಷ್ಟನ್ನು ಹೊಂದಿದೆ. ಶೇ. 30ರೊಂದಿಗೆ ಆಂಧ್ರ ಪ್ರದೇಶ ಮೂರನೇ ಸ್ಥಾನದಲ್ಲಿದೆ.

2023ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಸುಮಾರು 86,395 ಸ್ಮಾರ್ಟ್‌ಫೋನ್‌ಗಳನ್ನು ಪೊಲೀಸರು ಬ್ಲಾಕ್​ ಮಾಡಿದ್ದಾರೆ. ಈ ಪೈಕಿ 25,598 ಫೋನ್‌ಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಅದರಲ್ಲಿ 10,018 ಫೋನ್‌ಗಳನ್ನು ಅನ್‌ಬ್ಲಾಕ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)