ನ್ಯೂಸ್

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲವೆಂದ ತೇಜಸ್ವಿ ಯಾದವ್!, ಇದಕ್ಕೆ ಚುನಾವಣಾ ಆಯೋಗ ಹೇಳಿದ್ದೇನು.? | Tejashwi Yadav

Tejashwi Yadav: ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆಯಲಾಗಿದೆ ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಶನಿವಾರ (ಅಗಸ್ಟ್2) ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿದ್ದಾರೆ.

ಪಟನಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ, ತಮ್ಮ ಚುನಾವಣಾ ಫೋಟೋ ಗುರುತಿನ ಚೀಟಿ (EPIC) ಸಂಖ್ಯೆಯನ್ನು ಪ್ರದರ್ಶಿಸಿ ಈ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದು ಹಾಕಲಾಗಿದ್ದು, ನಾನು ಚುನಾವಣೆಯಲ್ಲಿ ಹೇಗೆ ಸ್ಪರ್ಧಿಸಲಿ ? ಎಂದು ಪ್ರಶ್ನಿಸಿದ್ದಾರೆ.ಸಾಂವಿಧಾನಿಕ ಸಂಸ್ಥೆಯಾಗಿರುವ ಚುನಾವಣಾ ಆಯೋಗವು ಸರ್ವಾಧಿಕಾರಿಯಾಗಿ ವರ್ತಿಸುತ್ತಿದೆ, ಪ್ರತಿಪಕ್ಷಗಳ ದೂರುಗಳು ಮತ್ತು ಸುಪ್ರೀಂ ಕೋರ್ಟ್ ನೀಡಿದ ಸಲಹೆಗಳಿಗೆ ಆಯೋಗ ಬೆಲೆ ನೀಡುತ್ತಿಲ್ಲ ಎಂದರು.

ಆರೋಪ ದುರುದ್ದೇಶಪೂರಿತ ಎಂದ ಚುನವಣಾ ಆಯೋಗ

ತೇಜಸ್ವಿ ಯಾದವ್ ಆರೋಪಕ್ಕೆ ತಿರುಗೇಟು ನೀಡಿರುವ ಚುನಾವಣಾ ಆಯೋಗ, ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂಬ ಯಾದವ್ ಹೇಳಿಕೆ ಹಿಂದೆ ದುರುದ್ದೇಶವಿದ್ದು, ಅವರ ಹೆಸರು ಪಾಟ್ನಾದ ಪಶುವೈದ್ಯಕೀಯ ಕಾಲೇಜಿನ ಮತಗಟ್ಟೆಯಲ್ಲಿ ಸರಣಿ ಸಂಖ್ಯೆ 416 ರಲ್ಲಿದೆ ಎಂದು ಸ್ಪಷ್ಟನೆ ನೀಡಿದೆ.

ಚುನಾವಣಾ ಆಯೋಗ ಒದಗಿಸಿದ EPIC ಸಂಖ್ಯೆ, ಯಾದವ್ ಹಂಚಿಕೊಂಡಿರುವ EPIC ಸಂಖ್ಯೆಗಳು ಭಿನ್ನವಾಗಿರುವುದು ಹೊಸ ಚರ್ಚೆಗೆ ಗ್ರಾಸವಾಗಿದೆ. ವಿಶೇಷ ತೀವ್ರ ಪರಿಷ್ಕರಣೆ (SIR) ಭಾಗವಾಗಿ ಸಿದ್ಧಪಡಿಸಲಾದ ಕರಡು ಮತದಾರರ ಪಟ್ಟಿ ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂದು ಆಯೋಗ ತಿಳಿಸಿದೆ(ಏಜೆನ್ಸೀಸ್)