ಬ್ಯಾಂಕಾಕ್: ಐ ಫೋನ್ ಕೊಳ್ಳಬೇಕೆಂಬ ಆಸೆ ಯಾರಿಗಿರವುದಿಲ್ಲ ಹೇಳಿ. ದುಬಾರಿ ಬೆಲೆಯ ಐ ಫೋನ್ ಕೊಂಡು ಶೋಕಿ ಮಾಡಬೇಕೆಂಬ ಬಯಕೆ ಈಗಿನ ಯುವ ಸಮಾಜದ ಅನೇಕರಲ್ಲಿದೆ. ಅದೇ ರೀತಿ ಆಸೆಯಿಂದ ಐ ಫೋನ್ ಖರೀದಿಸಿದವನೊಬ್ಬನ ಕಥೆ ಇದು.. ಐ ಫೋನ್ ಆರ್ಡರ್ ಮಾಡಿ ಕಾದವನಿಗೆ ಬಂದಿದ್ದು, ಅವನಷ್ಟೇ ಎತ್ತರದ ಐ ಫೋನ್! ಹಾಗಾದರೆ ಆ ಫೋನ್ ವರ್ಕ್ ಆಗ್ತಿದ್ಯಾ? ಸಂಸ್ಥೆ ಕಡೆಯಿಂದ ತಪ್ಪೇನಾದರೂ ಆಯಿತಾ? ಇದನ್ನೆಲ್ಲ ತಿಳಿಯಲು ಮುಂದೆ ಓದಿ..
ಥೈಲ್ಯಾಂಡ್ನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಅಲ್ಲಿನ ಇ ಕಾಮರ್ಸ್ ಪ್ಲಾಟ್ಫಾರಂನಲ್ಲಿ ಐ ಫೋನ್ ಆಫರ್ ಇತ್ತಂತೆ. ಅದರಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಐ ಫೋನ್ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅದನ್ನು ಕಂಡು ಆಶ್ಚರ್ಯಗೊಂಡ ಯುವಕನೊಬ್ಬ ಐ ಫೋನ್ 7 ಬುಕ್ ಮಾಡಿದ್ದಾನೆ. ಫೋನ್ ಮನೆಗೆ ಬರುವ ದಾರಿಯನ್ನೇ ಕಾಯುತ್ತಾ ಕುಳಿತಿದ್ದಾನೆ.
ನಿಗದಿತ ದಿನದಂದು ಫೋನ್ ಯುವಕನ ಮನೆಗೆ ಬಂದು ತಲುಪಿದೆ. ಆದರೆ ಆ ಫೋನ್ ಬಾಕ್ಸ್ ಕಂಡೊಡನೆ ಯುವಕ ಗಾಬರಿಯಾಗಿದ್ದಾನೆ. ಏಕೆಂದರೆ ಆ ಬಾಕ್ಸ್ ಯುವಕನಷ್ಟೇ ಉದ್ದವಿತ್ತಂತೆ. ಕಾತುರದಿಂದ ಆ ಬಾಕ್ಸ್ ತೆರೆದು ನೋಡಿದ್ದಾನೆ. ಆಗ ಅವನಿಗೆ ಶಾಕ್ ಆಗಿದೆ. ಐ ಫೋನ್ 7ಗೆ ಹೋಲುವ ಟೇಬಲ್ ಒಂದು ಆತನ ಮನೆಗೆ ಬಂದಿದೆ. ಆಮೇಲೆ ಸರಿಯಾಗಿ ಆಫರ್ ನೋಡಿದಾಗ ಯುವಕ ತನ್ನ ತಲೆಗೆ ತಾನೇ ಹೊಡೆದುಕೊಂಡಿದ್ದಾನೆ.
ಆಫರ್ ಇದ್ದಿದ್ದು ನಿಜ. ಆದರೆ ಅದು ಐ ಫೋನ್ಗಳಿಗಲ್ಲ. ಐ ಫೋನ್ ಹೋಲುವ ಸಾಮಾಗ್ರಿಗಳಿಗೆ. ಅದನ್ನು ಸರಿಯಾಗಿ ಓದದ ಯುವಕ ಈ ರೀತಿ ಬಕ್ರ ಆಗಿದ್ದಾನೆ. ಕಡಿಮೆ ಬೆಲೆ ಕೊಟ್ಟು ತರಿಸಿಕೊಂಡ ಐ ಫೋನ್ ಟೇಬಲ್ನ್ನು ಈಗ ಮನೆಯ ಬಳಕೆಗೆ ಇಟ್ಟುಕೊಂಡಿದ್ದಾನಂತೆ. (ಏಜೆನ್ಸೀಸ್)