ನ್ಯೂಸ್

ಪ್ರೀತಿಸಿದವಳ ಜತೆ ಮದುವೆಗೆ ನಿರಾಕರಣೆ; ತಂದೆ-ತಾಯಿ-ಸಹೋದರನನ್ನು ಕತ್ತು ಸೀಳಿ ಕೊಂದ 15ರ ಬಾಲಕ

ಗಾಜಿಪುರ​: ತಾನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿ ಜೊತೆ ಮದುವೆ ಮಾಡಿಸಲಿಲ್ಲ ಎಂಬ ಕಾರಣಕ್ಕೆ 15 ವರ್ಷದ ಬಾಲಕನೋರ್ವ ತಂದೆ, ತಾಯಿ ಹಾಗೂ ಸಹೋದರನ ಕತ್ತು ಸೀಳಿ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಗಾಜಿಪುರದಲ್ಲಿ ನಡೆದಿದೆ.

ಗಾಜಿಪುರ ಜಿಲ್ಲೆಯ ನಂದಗಂಜ್​​ ಪೊಲೀಸ್​ ಠಾಣಾ ವ್ಯಾಪ್ತಿಯ ಕುಸುಮ್ಹಿಕಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆಗೆ ಬಳಸಲಾಗಿದ್ದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರನ್ನು ಮುನ್ಷಿ ಬಿಂದ್ (45), ದೇವಂತಿ ಬಿಂದ್​ (40), ರಾಮ್​ ಆಶಿಶ್​ ಬಿಂದ್​ (20) ಎಂದು ಗುರುತಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಓಂವೀರ್​ ಸಿಂಗ್​, ಆರೋಪಿಯು ಎರಡು ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದು, ತನ್ನ ಜೊತೆ ಮದುವೆ ಮಾಡಿಸುವಂತೆ ಪೋಷಕರ ಬಳಿ ಹೇಳಿದ್ದ. ಇದಕ್ಕೆ ಪೋಷಕರು ಒಪ್ಪಿರಲಿಲ್ಲ. ಇದರಿಂದ ಕುಪಿತಗೊಂಡ ಆರೋಪಿಯು ಕುಟುಂಬದವರ ಹತ್ಯೆ ಮಾಡಲು ಮುಂದಾಗಿ ಸಂಚು ರೂಪಿಸಿದ್ದಾನೆ. ಬಳಿಕ ಚಾಕು ಒಂದನ್ನು ಖರೀದಿಸಿದ್ದಾನೆ.

ಜುಲೈ 10ರಂದು ತನ್ನ ಸಹೋದರನ ಜೊತೆಗೆ ಆರ್ಕೆಸ್ಟ್ರಾ ನೋಡಲು ಹೋಗಿದ್ದ ಆರೋಪಿಯು ಮನೆಗೆ ಬಂದ ಬಳಿಕ ಕುಟುಂಬದವರ ಜೊತೆ ಊಟ ಸೇವಿಸಿ ನಿದ್ರೆಗೆ ಜಾರಿದ್ದಾನೆ. ರಾತ್ರಿ 11ರ ಸುಮಾರಿಗೆ ಮದ್ಯ ಸೇವಿಸಿ ಆ ಬಳಿಕ ತಂದೆ, ತಾಯಿ ಹಾಗೂ ಸಹೋದರನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಹತ್ಯೆ ಬಳಿಕ ಕೃತ್ಯಕ್ಕೆ ಬಳಸಲಾಗಿದ್ದ ಚಾಕುವನ್ನು ಹೊಲದಲ್ಲಿ ಎಸೆದ ಆರೋಪಿ ಆರ್ಕೆಸ್ಟ್ರಾ ವೀಕ್ಷಿಸಲು ಹೋಗಿದ್ದಾನೆ. 1:45ರ ಸುಮಾರಿಗೆ ಸಂಬಂಧಿಕರಿಗೆ ಕರೆ ಮಾಡಿ ಮಲಗಿದ್ದವರನ್ನು ತಾರೋ ಕೊಲೆ ಮಾಡಿದ್ಧಾರೆ ಎಂದು ಕಥೆ ಕಟ್ಟಿದ್ದಾನೆ.

ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಅಧಿಕಾರಿಗಳು ಅನುಮಾನದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ನಡೆಯುತ್ತಿದ್ದು ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಓಂವೀರ್​ ಸಿಂಗ್ ತಿಳಿಸಿದ್ದಾರೆ.