ನ್ಯೂಸ್

ಅಪಘಾತದಲ್ಲಿ ಇಬ್ಬರನ್ನು ಕೊಂದ ಅಪ್ರಾಪ್ತನಿಗೆ ವಿಚಿತ್ರ ಶಿಕ್ಷೆ; ಆಕ್ಸಿಡೆಂಟ್​ ಬಗ್ಗೆ ಪ್ರಬಂಧ, ಪೊಲೀಸರ ಜತೆ ಕೆಲಸ... ಇದೊಂದು ಶಿಕ್ಷೆನಾ?

ಪುಣೆ: ಕುಡಿದ ಮತ್ತಿನಲ್ಲಿ ಕಾರನ್ನು ಮನಂಬಂದಂತೆ ಚಲಾಯಿಸಿ ವ್ಯಕ್ತಿಯೋರ್ವ ಬೈಕ್​ ಸವಾರರನ್ನು ಬಲಿ ಪಡೆದಿರುವ ಘಟನೆ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ. ಕೋರೆಗಾಂವ್ ಪಾರ್ಕ್‌ ಸಮೀಪ ಈ ದುರ್ಘಟನೆ ಸಂಭವಿಸಿದ್ದು, ದ್ವಿಚಕ್ರದಲ್ಲಿ ತೆರಳುತ್ತಿದ್ದ ದಂಪತಿ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಅಪ್ರಾಪ್ತ ವಯಸ್ಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಶಕ್ಕೆ ಪಡೆದಿದ್ದು, ಈತನನ್ನು ವಶಕ್ಕೆ ಪಡೆದ 15 ಗಂಟೆಗಳಲ್ಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಕೂರು ಮಾಡಿದೆ. ಇದಲ್ಲದೆ ಈತನಿಗೆ ವಿಧಿಸಿರುವ ಶಿಕ್ಷೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಮೃತರನ್ನು ಮಧ್ಯಪ್ರದೇಶ ಮೂಲದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಷ್ಟ ಎಂದು ಗುರುತಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಆಯುಕ್ತ ಅಮಿತೇಷ್​ ಕುಮಾರ್, ಘಟನೆಯ ಭಾನುವಾರ ಮುಂಜಾನೆ 2:15ರ ಸುಮಾರಿಗೆ ನಡೆದಿದ್ದು, ಅಪಘಾತದ ಬಳಿಕ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಅಪ್ರಾಪ್ತ ವಯಸ್ಕನಾಗಿರುವ ಕಾರಣ ಕಾರು ಚಲಾಯಿಸಲು ಕೊಟ್ಟ ಆತನ ತಂದೆ ಹಾಗೂ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಬಾರ್ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿಯನ್ನು ಬಂಧಿಸಿದ 15 ಗಂಟೆಗಳಲ್ಲಿ ಆತನಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ಜಾಮೀನು ವಿಚಾರಣೆಯ ವಿವರಗಳನ್ನು ಸಾರ್ವಜನಿಕಗೊಳಿಸದಿದ್ದರೂ, ಜಾಮೀನು ನಿರಾಕರಿಸುವಷ್ಟು ಅಪರಾಧವು ಗಂಭೀರವಾಗಿಲ್ಲ ಎಂದು ಬಾಲಪರಾಧಿ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಮುಂದಿನ 15 ದಿನಗಳ ಕಾಲ ಆತ ಸಂಚಾರಿ ಪೊಲೀಸರೊಂದಿಗೆ ಕೆಲಸ ಮಾಡಬೇಕು. ಅಪಘಾತದ ಬಗ್ಗೆ ಪ್ರತಿನಿತ್ಯ ಪ್ರಬಂಧ ಬರೆಯಬೇಕು, ಕುಡಿತದ ಚಟ ಬಿಡಲು ಚಿಕಿತ್ಸೆ ಹಾಗೂ ಕೌನ್ಸಿಲಿಂಗ್​ ಪಡೆಯಬೇಕು ಎಂದು ನ್ಯಾಯಾಲಯ ಸೂಚಿಸಿದೆ ಎಂದು ಪೊಲೀಸ್​ ಆಯುಕ್ತ ಅಮಿತೇಷ್​ ಕುಮಾರ್ ತಿಳಿಸಿದ್ದಾರೆ.