Air India: ನವದೆಹಲಿಯಿಂದ ಹೊರಟಿದ್ದ ಮತ್ತೊಂದು ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದ್ದು, ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಾಪಸ್ ಮತ್ತೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ ಎಂದು ಇಂದು (ಆಗಸ್ಟ್ 31) ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಏರ್ ಇಂಡಿಯಾ, ಇಂದು ಬೆಳಿಗ್ಗೆ AI2913 ಸಂಖ್ಯೆ ಏರ್ ಇಂಡಿಯಾ ವಿಮಾನ ನವದೆಹಲಿ ಏರ್ಪೋರ್ಟ್ನಿಂದ ಮಧ್ಯಪ್ರದೇಶದ ಇಂದೋರ್‌ಗೆ ಹೊರಟಿತ್ತು. ಆದಾಗ್ಯೂ, ಕಾಕ್‌ಪಿಟ್‌ನಲ್ಲಿದ್ದ ಸಿಬ್ಬಂದಿ ಬಲ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿದ್ದಾರೆ. ತಕ್ಷಣ ಅವರು ಪೈಲಟ್‌ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ವಿಮಾನವನ್ನು ಮತ್ತೆ ನಿಲ್ದಾಣದಲ್ಲಿ ಇಳಿಸಲಾಗಿದೆ ಎಂದು ತಿಳಿಸಿದೆ.
ವಿಮಾನದ ಎಂಜಿನ್‌ನಲ್ಲಿನ ಸಮಸ್ಯೆಯನ್ನು ತಾಂತ್ರಿಕ ತಜ್ಞರ ತಂಡವು ಪರಿಶೀಲಿಸಲಿದೆ. ಈ ವಿಮಾನದಲ್ಲಿ ಇಂದೋರ್ ತಲುಪಬೇಕಿದ್ದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಈ ಎಲ್ಲಾ ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ಅವರನ್ನು ಕರೆದೊಯ್ಯಲಾಗುತ್ತಿದೆ ಎಂದು ಅದು ಹೇಳಿದೆ. ಘಟನೆಯ ಬಗ್ಗೆ ವಾಯು ಸುರಕ್ಷತಾ ನಿಯಂತ್ರಕ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ತಿಳಿಸಿರುವುದಾಗಿ ವಿಮಾನಯಾನ ಸಂಸ್ಥೆ ಹೇಳಿದೆ.
ಅಹಮದಾಬಾದ್‌ನಲ್ಲಿ ಇತ್ತೀಚೆಗೆ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು. ಒಬ್ಬರನ್ನು ಹೊರತುಪಡಿಸಿ ವಿಮಾನದಲ್ಲಿದ್ದ 240 ಮಂದಿ ಮೃತಪಟ್ಟಿದ್ದರು. ಜೊತೆಗೆ ಎಂಬಿಬಿಎಸ್ ಹಾಸ್ಟೆಲ್ ಕಟ್ಟಡದ ಮೇಲೆ ವಿಮಾನ ಬಿದ್ದಿದ್ದರಿಂದ ಅಲ್ಲಿದ್ದ ವಿದ್ಯಾರ್ಥಿಗಳು ಸೇರಿ ಒಟ್ಟು 294 ಮಂದಿ ಸಾವನ್ನಪ್ಪಿದ್ದರು. (ಏಜೆನ್ಸೀಸ್)