ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ತಲೆಗೆ ರಾಡ್ನಿಂದ ಹಲ್ಲೆ ಮಾಡಿರುವ ಘಟನೆ ನಗರದ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸ್ನೇಹಾ ಸಿಕ್ತ ಚಟರ್ಜಿ (26) ಎಂಬಾಕೆಯ ಮೇಲೆ ಆಕೆಯ ಪ್ರಿಯಕರ ಪ್ರಿಯತಮ ರವಿಕುಮಾರ್ (28) ಎಂಬಾತ ಹಲ್ಲೆ ಮಾಡಿದ್ದಾರೆ. ಇಬ್ಬರು ಸಹ ಟೆಕ್ಕಿಗಳು. ಕಳೆದ ಒಂದು ವರ್ಷದಿಂದ ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ರವಿಕುಮಾರ್ ಕೆಲಸ ಮಾಡುತ್ತಿದ್ದ. ಅದೇ ಕಂಪನಿಯಲ್ಲಿ ಸ್ನೇಹಾ ಇಂಟರ್ನ್ ಆಗಿ ಸೇರಿಕೊಂಡಿದ್ದಳು. ಈ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರ ಆಗಿತ್ತು.
ಇತ್ತೀಚೆಗೆ ಸ್ನೇಹಾ ಬೇರೆ ಕಂಪನಿ ಸೇರಿಕೊಂಡಿದ್ದಳು. ರವಿಕುಮಾರ್ ಕರೆ ಮಾಡಿದಾಗಲೆಲ್ಲ ಅದನ್ನು ನಿರ್ಲಕ್ಷಿಸುತ್ತಿದ್ದಳು ಎನ್ನಲಾಗಿದೆ. ಕರೆ ಸ್ವೀಕರಿಸಿದರೂ ಸರಿಯಾಗಿ ಮಾತನಾಡುತ್ತಿಲ್ಲವೆಂದು ಆಕೆಯ ಮೇಲೆ ಕೋಪಗೊಂಡಿದ್ದ. ಅಲ್ಲದೆ, ಆಕೆಯ ನಡೆಯಿಂದ ರವಿಕುಮಾರ್ ಅನುಮಾನಗೊಂಡಿದ್ದ.
ಆಗಸ್ಟ್ 2ರ ಬುಧವಾರ ಮುಂಜಾನೆ 3.30ರ ಸುಮಾರಿಗೆ ರವಿಕುಮಾರ್, ತನ್ನ ಪ್ರೇಯಸಿಯನ್ನು ಮೈಕೋ ಲೇಔಟ್ನಲ್ಲಿರುವ ಪಿಜಿ ಬಳಿ ಕರೆಸಿಕೊಂಡಿದ್ದ. ಈ ವೇಳೆ ಕಬ್ಬಿಣದ ರಾಡ್ನಿಂದ ಸ್ನೇಹಾ ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದ. ರಕ್ತಸ್ರಾವ ಸ್ಥಿತಿಯಲ್ಲಿದ್ದ ಸ್ನೇಹಾಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ನಿಮ್ಹಾನ್ಸ್ನಲ್ಲಿ ಆಕೆಗೆ ಚಿಕಿತ್ಸೆ ಮುಂದುವರಿದಿದೆ.
ಘಟನೆ ಸಂಬಂಧ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ರವಿಕುಮಾರ್ನನ್ನು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್)