ನವದೆಹಲಿ: ದೀರ್ಘಕಾಲದಿಂದ ಕುಸಿತದ ಹಂತದಲ್ಲಿರುವ ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಪ್ರಸಕ್ತ ವರ್ಷದಲ್ಲಿ ಚೇತರಿಕೆ ಕಾಣಲಿದೆ. ಭಾರತದಿಂದ ಭಾರೀ ಬೇಡಿಕೆ ಬಂದಿರುವುದೇ ಇದಕ್ಕೆ ಕಾರಣ. ಇದಲ್ಲದೆ, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲೂ ಬೇಡಿಕೆ ಇರುವುದಾಗಿ ಮೊಬೈಲ್ ಇಂಡಸ್ಟ್ರಿಯ ದೈತ್ಯ ಮುರಾತ ಮ್ಯಾನುಫ್ಯಾಕ್ಚರಿಂಗ್ ಕಂಪನಿ ತಿಳಿಸಿದೆ.
ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಹೆಚ್ಚಾಗಲಿದ್ದು, ಒಟ್ಟಾರೆ ಮಾರುಕಟ್ಟೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಏಕ-ಅಂಕಿಯ ಶೇಕಡಾವಾರು ಪ್ರಮಾಣದಲ್ಲಿ ಬೆಳೆಯುವ ಸಾಧ್ಯತೆಯಿದೆ ಎಂದು ಕಂಪನಿಯ ಅಧ್ಯಕ್ಷ ನೊರಿಯೋ ನಾಕಜಿಮಾ ಮಂಗಳವಾರ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಚೀನಾ ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆ ಅನಿಸಿಕೊಂಡರು ತೀರಾ ಕಡಿಮೆ ಬೇಡಿಕೆ ಇರುವುದು ನಾಕಜಿಮಾ ಅವರಿಗೆ ನಿರಾಸೆ ಉಂಟುಮಾಡಿದೆ. ಅಲ್ಲದೆ, ಚೀನಾ ಗ್ರಾಹಕರಲ್ಲಿ ಆಸಕ್ತಿ ಇಲ್ಲದಿರುವುದರಿಂದ ಚೀನಾ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಮತ್ತಷ್ಟು ಕುಗ್ಗುವ ಸಾಧ್ಯತೆ ಇದೆ ಇದೆ ಎಂದಿರುವ ನಾಕಜಿಮಾ, ಭಾರತದಲ್ಲಿನ ಭಾರೀ ಬೇಡಿಕೆಯು ಒಂದು ಭರವಸೆಯಾಗಿದೆ ಎಂದಿದ್ದಾರೆ.
ಭಾರತದಲ್ಲಿ 5ಜಿ ಅಳವಡಿಸಿಕೊಂಡಿರುವುದು ಸ್ಮಾರ್ಟ್‌ಫೋನ್ ಬೇಡಿಕೆಗೆ ಪ್ರಮುಖ ಬೆಳವಣಿಗೆಯಾಗಿದೆ. ಅಲ್ಲದೆ, ಇದೇ ವರ್ಷ ಭಾರತ, ಚೀನಾವನ್ನು ಹಿಂದಿಕ್ಕಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಪಂಚದ ಮೊದಲ ರಾಷ್ಟ್ರ ಎನಿಸಿಕೊಂಡಿರುವುದು ಜಾಗತಿಕ ಮಾರುಕಟ್ಟೆಗೆ ಪ್ರಮುಖ ಬೆಳವಣಿಗೆಯಾಗಿದೆ. ಚೀನಾ 5ಜಿ ಅಳವಡಿಸಿಕೊಂಡಿದ್ದರೂ ಸಹ ಅಲ್ಲಿ ಬದಲಿ ಬೇಡಿಕೆ ತುಂಬಾ ದುರ್ಬಲವಾಗಿದೆ ಎಂದಿರುವ ನಾಕಜಿಮಾ, ಭಾರತದ ಜನಸಂಖ್ಯೆ ಮತ್ತು 5ಜಿ ಅಳವಡಿಕೆ ಮುಂದಿನ ವರ್ಷಗಳಲ್ಲಿ ಮಾರಾಟವನ್ನು ಹೆಚ್ಚಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಮಲ್ಟಿಲೇಯರ್ ಸೆರಾಮಿಕ್ ಕೆಪಾಸಿಟರ್‌ಗಳ ವಿಶ್ವದ ಅತಿದೊಡ್ಡ ತಯಾರಕರಾದ ಜಪಾನ್ನ ಕ್ಯೋಟೋ ಮೂಲದ ಮುರಾತ, ಆ್ಯಪಲ್ ಐಎನ್ಸಿ, ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಕೋ ಮತ್ತು ಚೀನೀ ತಯಾರಕರು ಬಳಸುವ ಸ್ಮಾರ್ಟ್‌ಫೋನ್ ಘಟಕಗಳ ಒಂದು ಶ್ರೇಣಿಯನ್ನು ಪೂರೈಸುತ್ತದೆ.
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಆಲ್ಫಾಬೆಟ್ ಇಂಕ್‌ನ ಆಂಡ್ರಾಯ್ಡ್ ಸಾಫ್ಟ್‌ವೇರ್ ಸಾಧನಗಳು ಹೆಚ್ಚಿನ ಪ್ರಾಬಲ್ಯವನ್ನು ಹೊಂದಿವೆ. ಆ್ಯಪಲ್‌ನ ಐಫೋನ್ ಸಹ ಇತ್ತೀಚಿನ ದಿನಗಳಲ್ಲಿ ಪೈಪೋಟಿ ನೀಡುತ್ತಿದೆ. ಆದರೆ, ಮುರಾತ ಕಂಪನಿ ಭಾರತದಲ್ಲಿ ಯಾವುದೇ ಉತ್ಪಾದನಾ ಘಟಕಗಳನ್ನು ಹೊಂದಿಲ್ಲ. ಅದನ್ನು ನಿರ್ಮಿಸಲು ಯಾವುದೇ ತಕ್ಷಣದ ಯೋಜನೆಗಳನ್ನೂ ಹಾಕಿಕೊಂಡಿಲ್ಲ. ಮೊದಲು ಈ ಬಗ್ಗೆ ಅಧ್ಯಯನ ಮಾಡಿ ಅಗತ್ಯವಿದ್ದರೆ ತ್ವರಿತವಾಗಿ ಘಟಕ ನಿರ್ಮಾಣಕ್ಕೆ ಚಾಲನೆ ನೀಡಬಹುದು ಎಂದು ನಕಾಜಿಮಾ ಹೇಳಿದ್ದಾರೆ. ಸದ್ಯಕ್ಕೆ, ಮಲೇಷ್ಯಾದಂತಹ ಪ್ರದೇಶದಲ್ಲಿ ಹಾಗೂ ಬೇರೆಡೆ ಅಸ್ತಿತ್ವದಲ್ಲಿರುವ ಸೌಲಭ್ಯಗಳಿಂದ ಮುರಾತ ತನ್ನ ಘಟಕಗಳನ್ನು ಭಾರತಕ್ಕೆ ರವಾನಿಸಬಹುದು ಎಂದು ಅವರು ಹೇಳಿದರು. (ಏಜೆನ್ಸೀಸ್)