ಈ ಆಧುನಿಕ ಕಾಲದ ಮದುವೆಗಳು ತುಂಬಾ ವಿಶೇಷವಾಗಿ ನಡೆಯುತ್ತವೆ. ಮದುವೆ ಆಮಂತ್ರಣ ಪತ್ರಿಕೆಯಿಂದ ಹಿಡಿದು ಮದುವೆ ಮುಗಿಯುವವರೆಗೂ ಸಾಕಷ್ಟು ವಿಭಿನ್ನತೆ ತರಲು ಪ್ರಯತ್ನಿಸುತ್ತಾರೆ. ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಇದಕ್ಕೆ ಒಂದು ಉದಾಹರಣೆ. ಈ ಹಿಂದೆ ಮದುವೆಯಲ್ಲಿ ಪ್ರಮುಖವಾಗಿ ಶಾಸ್ತ್ರ-ಸಂಪ್ರದಾಯಗಳಿಗೆ ಮಾತ್ರ ಒತ್ತು ಕೊಡಲಾಗಿತ್ತು. ಆದರೆ, ಈಗ ಪ್ರತಿಯೊಂದಕ್ಕೂ ಆದ್ಯತೆ ನೀಡಲಾಗುತ್ತದೆ. ಅದು ಮದುವೆ ಆಮಂತ್ರಣ ಪತ್ರಿಕೆಯಿಂದಲೇ ಶುರುವಾಗುತ್ತದೆ.
ಮದುವೆ ಪತ್ರಿಕೆಗೆ ಕೂಡ ತುಂಬಾ ವಿಭಿನ್ನವಾಗಿ ಇರಬೇಕೆಂದು ಆಲೋಚಿಸುತ್ತಾರೆ. ವಿವಿಧ ಥೀಮ್ನಲ್ಲಿ ಆಮಂತ್ರಣ ಪತ್ರಿಕೆಗಳು ಸಿದ್ಧವಾಗುತ್ತಿವೆ. ಈಗಾಗಲೇ ಸಾಕಷ್ಟು ಆಮಂತ್ರಣ ಪತ್ರಿಕೆಗಳು ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿರುವುದನ್ನು ನೀವು ನೋಡಿರುತ್ತೀರಿ. ಅದೇ ರೀತಿ ಇತ್ತೀಚೆಗಷ್ಟೇ ಶಿಕ್ಷಕಿಯೊಬ್ಬರ ಮದುವೆ ಕಾರ್ಡ್ ವೈರಲ್ ಆಗಿದೆ. ಶಿಕ್ಷಕಿಯಾಗಿರುವ ಕಾರಣ ಪ್ರಶ್ನೆ ಪತ್ರಿಕೆಯ ರೂಪದಲ್ಲಿ ಮದುವೆ ಕಾರ್ಡ್ ಕೂಡ ಸಿದ್ಧಪಡಿಸಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಮಂತ್ರ ಮಂಡಲ ಮೂಲದ ಪ್ರತ್ಯೂಷಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕೆ ಫಣೀಂದ್ರ ಎಂಬ ವರನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೇ ಆಗಸ್ಟ್ 23 ರಂದು ಮದುವೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಪ್ರತ್ಯೂಷಾ ತಮ್ಮ ಮದುವೆ ಕಾರ್ಡ್ ತುಂಬಾ ವಿಶೇಷ ಹಾಗೂ ಸ್ಮರಣೀಯವಾಗಿರಬೇಕು ಎಂದು ಬಯಸಿ, ಅದಕ್ಕಾಗಿಯೇ ಮದುವೆ ಕಾರ್ಡನ್ನು ಪ್ರಶ್ನೆ ಪತ್ರಿಕೆಯ ರೂಪದಲ್ಲಿ ವಿನ್ಯಾಸಗೊಳಿಸಿದ್ದಾರೆ.
ಮದುವೆ ಪತ್ರಿಕೆಯಲ್ಲಿ ಎಲ್ಲ ಮಾಹಿತಿಗಳನ್ನು ಪ್ರಶ್ನೆ ಮತ್ತು ಉತ್ತರಗಳ ರೂಪದಲ್ಲಿ ನೀಡಲಾಗಿದೆ. ಮದುವೆಯ ಪತ್ರಿಕೆಯಲ್ಲಿ ಒಂದು ಉತ್ತರದ ಪ್ರಶ್ನೆಗಳು, ಬಹು ಆಯ್ಕೆಯ ಪ್ರಶ್ನೆಗಳು ಹಾಗೂ ನಿಜ ಅಥವಾ ಸುಳ್ಳು ಪ್ರಶ್ನೆಗಳಿಂದ ಕೂಡಿದೆ. ಮದುವೆಗೆ ಆಹ್ವಾನಿಸುವ ಜೋಡಿಯ ಹೆಸರನ್ನು ಬರೆಯಿರಿ? ಫೋಟೋದಲ್ಲಿರುವ ವ್ಯಕ್ತಿ ಯಾರೆಂದು ಗುರುತಿಸಿ? ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ. ಅಲ್ಲದ, ಮದುವೆ ಸಮಯ, ಮದುವೆ ಸ್ಥಳ, ಮದುವೆ ಮಂಟಪ ಹೀಗೆ 8 ವಿಭಾಗಗಳಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ ನೋಡುಗರಲ್ಲಿ ಪ್ರತ್ಯೂಷಾ ಕುತೂಹಲ ಮೂಡಿಸಿದ್ದಾರೆ.
ತನ್ನ ಶಿಕ್ಷಕಿ ಕೆಲಸದ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ಪ್ರತ್ಯೂಷಾ ತನ್ನ ಮದುವೆ ಕಾರ್ಡ್ ಅನ್ನು ಪ್ರಶ್ನೆ ಪತ್ರಿಕೆಯನ್ನಾಗಿ ಪರಿವರ್ತಿಸುವ ಮೂಲಕ ವೃತ್ತಿ ಪ್ರೇಮ ಮೆರೆದಿದ್ದಾರೆ. ಸದ್ಯ ಪ್ರತ್ಯೂಷಾ ಅವರ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್)