ಅಹಮದಾಬಾದ್ : ಗುಜರಾತ್ನ ವತ್ವಾ ಪ್ರದೇಶದಲ್ಲಿನ ಮಾಧವ್ ಪಬ್ಲಿಕ್ ಸ್ಕೂಲ್‌ನಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸಿದ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ವತ್ವಾದ ಮಾಧವ್ ಪಬ್ಲಿಕ್ ಸ್ಕೂಲ್‌ನಲ್ಲಿ ಗಣಿತ ಬೋಧಿಸುತ್ತಿದ್ದ ಅಭಿಷೇಕ್ ಪಟೇಲ್ ಅವರನ್ನೂ ಅಮಾನತು ಮಾಡಲಾಗಿದೆ.
ವೈರಲ್ ವಿಡಿಯೋದಲ್ಲಿ ಪಟೇಲ್ ವಿದ್ಯಾರ್ಥಿಯ ತೋಳನ್ನು ತಿರುಗಿಸಿ ಅವನ ಕೂದಲನ್ನು ಹಿಡಿದು ಎಳೆದಿದ್ದಾನೆ. ಬಳಿಕ ವಿದ್ಯಾರ್ಥಿಯನ್ನು ಹಿಡಿದು ಗೋಡೆಗೆ ಹೊಡೆದಿದ್ದಾನೆ. ಅಷ್ಟೆ ಅಲ್ಲದೆ ಅಪ್ರಾಪ್ತ ಬಾಲಕನಿಗೆ ಸುಮಾರು ಹನ್ನೆರಡು ಬಾರಿ ಕಪಾಳಮೋಕ್ಷ ಮಾಡಿ ಬಳಿಕ ಅವನನ್ನು ನೆಲಕ್ಕೆ ತಳ್ಳುವುದನ್ನು ಕಾಣಬಹುದಾಗಿದೆ.
ವಿಡಿಯೋ ವೈರಲ್ ಆದ ನಂತರ ಜಿಲ್ಲಾ ಶಿಕ್ಷಣಾಧಿಕಾರಿ ಶಾಲೆಯ ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡಿ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕ್ರೂರವಾಗಿ ವರ್ತಿಸಿರುವ ಶಿಕ್ಷಕನನ್ನು ವತ್ವಾ ಪೊಲೀಸರು ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಭಾರತದಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆ ವಿಧಿಸುವುದು ಕಾನೂನು ಬಾಹಿರವಾಗಿದೆ. ಸುಪ್ರೀಂ ಕೋರ್ಟ್ 2000ರಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ಶಿಕ್ಷೆಯ ಬಳಕೆಯನ್ನು ನಿಷೇಧಿಸಿತು. ಆದರೆ ದೈಹಿಕ ಶಿಕ್ಷೆಯನ್ನು ಬಳಸುವ ಅಭ್ಯಾಸವು ದೇಶಾದ್ಯಂತ ಶಾಲೆಗಳಲ್ಲಿ ಮಕ್ಕಳನ್ನು ಶಿಸ್ತುಗೊಳಿಸಲು ಶಿಕ್ಷಕರಿಂದ ವ್ಯಾಪಕವಾಗಿ ಬಳಸಲಾಗುವ ಸಾಧನವಾಗಿ ಉಳಿದಿದೆ.
ಇತ್ತೀಚಿನ ಅಂತಹ ವಿಚಾರಣೆಯಲ್ಲಿ ಛತ್ತೀಸ್‌ಗಢ ಹೈಕೋರ್ಟ್, ಶಾಲೆಯಲ್ಲಿ ಮಗುವನ್ನು ಶಿಸ್ತುಗೊಳಿಸಲು ದೈಹಿಕ ಹಿಂಸೆ ಬಳಸುವುದು ಕ್ರೂರವಾಗಿದೆ ಮತ್ತು ಭಾರತೀಯ ಸಂವಿಧಾನದ 21ನೇ ವಿಧಿಯು ಖಾತರಿಪಡಿಸುವ ಮಗುವಿನ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು (RTE) ಕಾಯಿದೆ, 2009 ಶಾಲೆಗಳಲ್ಲಿ ದೈಹಿಕ ಶಿಕ್ಷೆಯನ್ನು ಶಿಕ್ಷಾರ್ಹ ಅಪರಾಧವಾಗಿದೆ. 2015ರ ಬಾಲಾಪರಾಧಿ ಕಾಯ್ದೆಯಡಿಯೂ ಇದು ಕಾನೂನುಬಾಹಿರವಾಗಿದೆ.(ಏಜೆನ್ಸೀಸ್)