ಮಧ್ಯಪ್ರದೇಶದಲ್ಲಿ ಶಿಕ್ಷಕರ ನೇಮಕಾತಿ ಹುದ್ದೆ ಹೆಚ್ಚಿಸಲು ರಾಹುಲ್ ಗಾಂಧಿ ಒತ್ತಾಯ 
ನ್ಯೂಸ್

ಶಿಕ್ಷಕರ ನೇಮಕಾತಿ ಕಗ್ಗಂಟು; ಮೋಹನ್ ಯಾದವ್‌ಗೆ ರಾಹುಲ್ ಪತ್ರ, ಖಾಲಿ ಹುದ್ದೆ ಹೆಚ್ಚಿಸುವಂತೆ ಆಗ್ರಹ | MP Teacher Recruitment

ಮಧ್ಯಪ್ರದೇಶದಲ್ಲಿ ಶಿಕ್ಷಕರ ನೇಮಕಾತಿ ಹುದ್ದೆಗಳನ್ನು ಹೆಚ್ಚಿಸುವಂತೆ ಸಿಎಂ ಮೋಹನ್ ಯಾದವ್‌ಗೆ ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ. ಖಾಲಿ ಹುದ್ದೆಗಳು, ವಯೋಮಿತಿ ಹಾಗೂ ಪ್ರತಿಭಟನಾ ನಿರತ ಅಭ್ಯರ್ಥಿಗಳ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ.

Rahul's letter to Mohan Yadav: ಮಧ್ಯಪ್ರದೇಶದಲ್ಲಿ ಶಿಕ್ಷಕರ ಕೊರತೆ ಹಾಗೂ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ವ್ಯವಸ್ಥೆ ವಿಚಾರವಾಗಿ ಕಾಂಗ್ರೆಸ್‌ ಇದೀಗ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಈ ನಡುವೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಪತ್ರ ಬರೆದು ಶಿಕ್ಷಕರ ನೇಮಕಾತಿಯಲ್ಲಿನ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.

ಸೆಪ್ಟೆಂಬರ್ 29ರಂದು ಬರೆದ ಪತ್ರದಲ್ಲಿ ರಾಹುಲ್ ಗಾಂಧಿ, ಮಧ್ಯಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 1 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ. ಹುದ್ದೆಗಳ ಸಂಖ್ಯೆ ಹೆಚ್ಚಿಸುವಂತೆ ಆಗ್ರಹಿಸಿ ಅಭ್ಯರ್ಥಿಗಳು ನಡೆಸುತ್ತಿರುವ ಹೋರಾಟದ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ಶಿಕ್ಷಕರ ಕೊರತೆಯಿಂದ ಮಕ್ಕಳ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

23,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ

2025ರ ಶಿಕ್ಷಕರ ನೇಮಕಾತಿಯಲ್ಲಿ 13,089 ವರ್ಗ-3 ಹಾಗೂ 10,800 ವರ್ಗ-2 ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಲಾಗಿದೆ. ಆದರೆ ಹುದ್ದೆಗಳ ಸಂಖ್ಯೆ ಕಡಿಮೆ ಇರುವುದರಿಂದ, ಹೆಚ್ಚಿನ ಹುದ್ದೆಗಳನ್ನು ಭರ್ತಿ ಮಾಡುವಂತೆ ಅಭ್ಯರ್ಥಿಗಳು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಇನ್ನು, ಇಂದೋರ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳು ತಮ್ಮ ಸಮಸ್ಯೆಗಳನ್ನು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದ್ದರು. ಉತ್ತಮ ಅಂಕ ಪಡೆದಿದ್ದರೂ ಹಲವರಿಗೆ ಖಾಯಂ ಉದ್ಯೋಗ ಸಿಗುತ್ತಿಲ್ಲ. ಇವರಲ್ಲಿ ಕೆಲವರು ಈಗಾಗಲೇ ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ವಯೋಮಿತಿ ಮೀರಿದ ಅಭ್ಯರ್ಥಿಗಳಿಗೂ ಕಳವಳ

ನೇಮಕಾತಿಗಾಗಿ ಹಲವು ವರ್ಷಗಳಿಂದ ಕಾಯುತ್ತಿರುವುದರಿಂದ ವಯೋಮಿತಿ ಮೀರಿರುವ ಅಭ್ಯರ್ಥಿಗಳ ಸಮಸ್ಯೆಯನ್ನೂ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದಾರೆ. ಬೇಡಿಕೆ ಈಡೇರಿಸಲು ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸುವ ಪರಿಸ್ಥಿತಿ ಏಕೆ ಬರಬೇಕು ಎಂದು ಪ್ರಶ್ನಿಸಿರುವ ಅವರು, ಪ್ರತಿಭಟನಾಕಾರರಿಗೆ ನೋಟಿಸ್ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನೋಟಿಸ್ ಹಿಂಪಡೆಯಲು ಆಗ್ರಹ

ಪ್ರತಿಭಟನಾ ನಿರತ ಅಭ್ಯರ್ಥಿಗಳಿಗೆ ನೀಡಿರುವ ನೋಟಿಸ್‌ಗಳನ್ನು ತಕ್ಷಣ ಹಿಂಪಡೆಯುವಂತೆ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಜತೆಗೆ, ವರ್ಗ-2 ಮತ್ತು ವರ್ಗ-3 ನೇಮಕಾತಿಗೆ ಬಡ್ತಿ ಪ್ರಕ್ರಿಯೆ ಆರಂಭಿಸಿ, ಎರಡನೇ ಹಂತದ ಕೌನ್ಸೆಲಿಂಗ್ ನಡೆಸುವಂತೆಯೂ ಆಗ್ರಹಿಸಿದ್ದಾರೆ.

1.15 ಲಕ್ಷ ಹುದ್ದೆಗಳಿಗೆ ಅನುಮೋದನೆ

ಶಿಕ್ಷಕರಿಗಾಗಿ 1.15 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ಶಿಕ್ಷಣ ಇಲಾಖೆ ಅನುಮೋದನೆ ನೀಡಿದ್ದರೂ, ಪ್ರಸ್ತುತ ಸುಮಾರು 15,000 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ಅಡುಗೆ ಮನೆಯಲ್ಲಿ 12 ಅಡಿ ಹೆಬ್ಬಾವು ಪ್ರತ್ಯಕ್ಷ; ಕಿಚನ್‌ ದೃಶ್ಯ ಕಂಡು ಕುಟುಂಬಕ್ಕೆ ನಡುಕ! | Python In Kitchen

ಹುದ್ದೆಗಳ ಸಂಖ್ಯೆ ಹೆಚ್ಚಿಸಿದರೆ ಶಿಕ್ಷಕರ ಕೊರತೆ ನೀಗುವುದರ ಜತೆಗೆ ಸಾವಿರಾರು ಯುವಕರಿಗೆ ಖಾಯಂ ಉದ್ಯೋಗ ಸಿಗಲಿದೆ. ಇದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಹ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)