ಲಖನೌ: ಕಾಲೇಜಿನಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರಿಗೆ ನಮಾಜ್ ಮಾಡುವುದನ್ನು ಹೇಳಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯೂ ಉತ್ತರಪ್ರದೇಶದ ಭಾಗ್ಪತ್ ಜಿಲ್ಲೆಯಲ್ಲಿ ನಡೆದಿದ್ದು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದರಲ್ಲಿ ಶಿಕ್ಷಕಿ ಕುಳಿತುಕೊಂಡು ವಿದ್ಯಾರ್ಥಿನಿಯರಿಗೆ ಸೂಚನೆ ನೀಡಬಹುದನ್ನು ಕಾಣಬಹುದಾಗಿದೆ. ಈ ಕುರಿತು ಭಾಗ್ಪತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆಯೂ ಹೋಶಿಯಾರಿ ದೇವಿ ಗರ್ಲ್ಸ್ ಇಂಟರ್ ಕಾಲೇಜಿನಲ್ಲಿ ನಡೆದಿದ್ದು ಇದರ ವಿಡಿಯೋವನ್ನು ಮೊದಲು ಹಿಂದೂ ಸಂಘಟನೆಯ ಮುಖಡಂರೊಬ್ಬರು ವಾಟ್ಸ್ಆ್ಯಪ್ನಲ್ಲಿ ಹರಿಬಿಟ್ಟಿದ್ದಾರೆ. ಇದಾದ ಕೆಲವೇ ಕ್ಷಣಗಳ ಬಳಿಕ ಸುದ್ದಿ ವೈರಲ್ ಆಗಿದ್ದು ನೆಟ್ಟಿಗರು ಶಿಕ್ಷಕಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಮೊದಲು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಭಾಗ್ಪತ್ ಪೊಲೀಸರು ನಂತರ ಅದನ್ನು ಡಿಲೀಟ್ ಮಾಡಿದ್ದಾರೆ ಮತ್ತು ಪ್ರಕರಣದ ಕುರಿತು ಮಾತನಾಡಲು ನಿರಾಕರಿಸಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿ ಸದಸ್ಯರು ನಾಟಕದ ರಿಹರ್ಸಲ್ ವೇಳೆ ಹಾಗೆ ಮಾಡಲಾಗಿತ್ತು ಎಂದು ವಿವರಣೆ ನೀಡಿದ್ಧಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೋಶಿಯಾರಿ ದೇವಿ ಗರ್ಲ್ಸ್ ಇಂಟರ್ ಕಾಲೇಜ್ ಮುಖ್ಯೋಪಾಧ್ಯಾಯ ಮುನೇಶ್ ಚೌಧರಿ ಕಳೆದ ವರ್ಷ ಅಕ್ಟೋಬರ್ ಸಮಯದಲ್ಲಿ ನಾಟಕದ ಅಭ್ಯಾಸದ ವೇಳೆ ಹುಡುಗಿಯರು ನಮಾಜ್ ಮಾಡುವುದಿತ್ತು. ಅಂತಿಮವಾಗಿ ಆ ದೃಶ್ಯವನ್ನು ನಾಟಕದಿಂದ ತೆಗೆದುಹಾಕಲಾಯಿತು ವೈರಲ್ ಆಗಿರುವ ವಿಡಿಯೋ ಆ ಸಮಯದಲ್ಲಿ ತೆಗೆದಿದ್ದು ಎಂದು ತಿಳಿಸಿದ್ದಾರೆ.