ನ್ಯೂಸ್

ಮಹಿಳಾ ಪ್ರಾಂಶುಪಾಲರ ಎದುರೇ ಮದ್ಯ ಸೇವಿಸಿದ ಶಿಕ್ಷಕ! ಇದು ತಪ್ಪಲ್ವಾ ಅಂದ್ರೆ ಆತ ಕೊಟ್ಟ ಕಾರಣ…..

ಮೋಹನ್​ ಶೆಟ್ಟಿ

ಛತ್ತೀಸ್‌ಗಢ: ಶಿಕ್ಷಕರೊಬ್ಬರು ಶಾಲಾ ಆವರಣದಲ್ಲೇ ಮದ್ಯಪಾನ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆದ ಬೆನ್ನಲ್ಲೇ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಈ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ವರದಿಯಾಗಿದೆ.

ಮಸ್ತೂರಿ ಬ್ಲಾಕ್‌ನ ಮಚ್ಚಾ ಜನಪದ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ಪ್ರಾಂಶುಪಾಲರು ತನ್ನ ಎದುರೇ ಕುಳಿತ್ತಿದ್ದರು ನಿರ್ಲಕ್ಷಿಸಿ, ಮದ್ಯಪಾನ ಸೇವಿಸಿದ ಶಿಕ್ಷಕನನ್ನು ಸಂತೋಷ್ ಕೇವತ್ ಎಂದು ಗುರುತಿಸಲಾಗಿದೆ. ಆತ ಬಹಿರಂಗವಾಗಿ ಮದ್ಯ ಸೇವನೆ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ನೇರವಾಗಿ ವಿಡಿಯೋ ಮಾಡಿಕೊಳ್ಳುವ ಮುಖೇನ ಶಿಕ್ಷಕನಿಗೆ ಇದು ತಪ್ಪಲ್ವಾ? ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಮುಜುಗರವಿಲ್ಲದೆ ಮದ್ಯಪಾನ ಮಾಡುತ್ತಿದ್ದ ಕೇವತ್​, ವಿಡಿಯೋ ಮಾಡುತ್ತಿದ್ದವರಿಗೆ ಬೆದರಿಕೆ ಕೂಡ ಹಾಕಿದ್ದಾನೆ. ಮಹಿಳಾ ಪ್ರಾಂಶುಪಾಲರ ಮುಂದೆ ಈ ರೀತಿ ಅಸಭ್ಯವಾಗಿ ವರ್ತಿಸೋದು ನಿಮಗೆ ಸರಿ ಅನಿಸುತ್ತದೆಯೇ ಎಂದಾಗ, ತೀವ್ರ ಒತ್ತಡದಿಂದ ನಾನು ಮದ್ಯ ಸೇವಿಸುತ್ತಿದ್ದೇನೆ ಎಂದು ಶಿಕ್ಷಕ ಹೇಳಿದ್ದಾರೆ.

ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದಂತೆ ದೃಶ್ಯಾವಳಿಗಳನ್ನು ಗಮನಿಸಿದ ಜಿಲ್ಲಾ ಶಿಕ್ಷಣ ಅಧಿಕಾರಿ (DEO) ತ್ವರಿತ ಕ್ರಮವನ್ನು ತೆಗೆದುಕೊಂಡಿದ್ದು, ಕರ್ತವ್ಯದಿಂದ ಶಿಕ್ಷಕ ಸಂತೋಷ್ ಕೇವತ್​ನನ್ನು ಅಮಾನತುಗೊಳಿಸಿದ್ದಾರೆ,(ಏಜೆನ್ಸೀಸ್).