ನ್ಯೂಸ್

ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಕೇಂದ್ರದಲ್ಲಿ ಶಿಕ್ಷಕ ಸಾವು

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕರೊಬ್ಬರು ಕ್ಯಾಂಪಸ್​ನಲ್ಲೇ ಕುಸಿದು ಬಿದ್ದು ಪ್ರಾಣಬಿಟ್ಟಿದ್ದಾರೆ.

ನಗರದ ಎನ್‌ಇಸ್ ಕಾಲೇಜು ಆವರಣದಲ್ಲಿ ಬುಧವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಭದ್ರಾವತಿಯ ಈಶ್ವರಮ್ಮ ಪ್ರೌಢಶಾಲೆ ಶಿಕ್ಷಕ ಎನ್.ಎಂ. ಕುಮಾರ್(48)ಮೃತರು.

ಕಳೆದ ಎರಡು ದಿನದಿಂದ (ಜು.13ರಿಂದ) ಮೌಲ್ಯಮಾಪನ ಮಾಡಿದ್ದ ಕುಮಾರ್ ಬುಧವಾರವೂ ಸಮಾಜ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಊಟಕ್ಕೆ ತೆರಳುವಾಗ ಕ್ಯಾಂಪಸ್‌ನಲ್ಲೇ ಕುಸಿದು ಬಿದ್ದರು. ತಕ್ಷಣ ಸ್ಥಳದಲ್ಲಿದ್ದ ಸಹೋದ್ಯೋಗಿ ಶಿಕ್ಷಕರು ಆಂಬುಲೆನ್ಸ್‌ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕುಮಾರ್ ಮೃತಪಟ್ಟಿದ್ದಾರೆ.

ಮೃತರು ಮಧುಮೇಹದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಭದ್ರಾವತಿಯ ಜನ್ನಾಪುರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು.