ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್ ಅನ್ನು ಕಾಂಗ್ರೆಸ್ ಹಿಂದಿಕ್ಕಿದೆ. ಇಲ್ಲಿ ಟ್ರೆಂಡ್ ಪ್ರಕಾರ ಕಾಂಗ್ರೆಸ್ 64 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಹುಮತದ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೈದರಾಬಾದ್‌ನಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರೇವಂತ್ ರೆಡ್ಡಿ ಹೈದರಾಬಾದ್‌ನಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಬೇರೆಯದೇ ದೃಶ್ಯ ಕಾಣಿಸಿತು. ತೆಲುಗು ದೇಶಂ ಪಕ್ಷ (ಟಿಡಿಪಿ) ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ಆದರೆ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ವಿಜಯದ ಸಂಭ್ರಮದಲ್ಲಿ ಅದರ ಬಾವುಟಗಳು ಜನರ ಗಮನ ಸೆಳೆದವು.
ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ
ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಎ. ರೇವಂತ್ ರೆಡ್ಡಿ ಅವರ ಮನೆ ಮತ್ತು ಕಾಂಗ್ರೆಸ್ ಪ್ರಧಾನ ಕಚೇರಿ ಗಾಂಧಿ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಟಿಡಿಪಿ ಬೆಂಬಲಿಗರು ಪಕ್ಷದ ಧ್ವಜಗಳನ್ನು ಹಿಡಿದು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಕಾಂಗ್ರೆಸ್ ಸೇರುವ ಮುನ್ನ ರೇವಂತ್ ರೆಡ್ಡಿ ಟಿಡಿಪಿಯಲ್ಲಿದ್ದರು. ಅದೊಂದು ಕುತೂಹಲಕಾರಿ ದೃಶ್ಯವಾಗಿತ್ತು. ಮೊದಲ ಬಾರಿಗೆ ತೆಲಂಗಾಣ ವಿಧಾನಸಭೆ ಚುನಾವಣೆಯಿಂದ ಟಿಡಿಪಿ ದೂರ ಉಳಿದಿದೆ.
2018ರಲ್ಲಿ ಕಾಂಗ್ರೆಸ್ ಜೊತೆಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಿತ್ತು ಟಿಡಿಪಿ
2018ರಲ್ಲಿ ತೆಲಂಗಾಣದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಆದರೆ ಈ ಮೈತ್ರಿಯಿಂದ ಹೀನಾಯ ಸೋಲನ್ನು ಎದುರಿಸಿತು ಮತ್ತು ಟಿಡಿಪಿ ಕೇವಲ ಎರಡು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಇಬ್ಬರೂ ಶಾಸಕರು ನಂತರ ಟಿಆರ್‌ಎಸ್‌ಗೆ (ಈಗ ಬಿಆರ್‌ಎಸ್) ಸೇರಿದರು. ಆಂಧ್ರಪ್ರದೇಶದ ಮತದಾರರು ಸೇರಿದಂತೆ ಟಿಡಿಪಿಯ ಸಾಂಪ್ರದಾಯಿಕ ಬೆಂಬಲಿಗರು ಮತ್ತು ಹೈದರಾಬಾದ್ ಮತ್ತು ತೆಲಂಗಾಣದ ಇತರ ಭಾಗಗಳಲ್ಲಿ ನೆಲೆಸಿರುವ ಮತದಾರರು ಈ ಬಾರಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ನಂಬಿದ್ದಾರೆ. ತೆಲಂಗಾಣದಲ್ಲಿ ಟಿಡಿಪಿ ಬೆಂಬಲಿಗರು ನಾಯ್ಡು ಅವರ ಬಂಧನದ ವಿರುದ್ಧ ಪ್ರತಿಭಟನೆಗೆ ಬಿಆರ್‌ಎಸ್ ಸರ್ಕಾರ ವಿಧಿಸಿದ ನಿರ್ಬಂಧಗಳಿಂದ ಬೇಸರದಲ್ಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.
ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ರೇವಂತ್ ರೆಡ್ಡಿ
ರೇವಂತ್ ರೆಡ್ಡಿ ಸಿಎಂ ಹುದ್ದೆ ರೇಸ್‌ನಲ್ಲಿ ಮುಂಚೂಣಿಯಲ್ಲಿರುವುದು ಗಮನಾರ್ಹ. ಕಾಂಗ್ರೆಸ್ ನಾಯಕರು ಮೊದಲು ರಾಜ್ಯ ಡಿಜಿಪಿ ಅಂಜನಿ ಕುಮಾರ್ ಅವರನ್ನು ಭೇಟಿ ಮಾಡಿ ನಂತರ ಹೈದರಾಬಾದ್‌ನಲ್ಲಿ ರೋಡ್ ಶೋ ನಡೆಸಿದರು. ಹೈದರಾಬಾದ್‌ನಲ್ಲಿರುವ ಪಕ್ಷದ ಕಚೇರಿಗೆ ಆಗಮಿಸಿದ ತಕ್ಷಣ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಪರ ‘ಸಿಎಂ-ಸಿಎಂ’ ಘೋಷಣೆಗಳನ್ನು ಕೂಗಿದರು. ತೆಲಂಗಾಣದ ಒಟ್ಟು 119 ಸ್ಥಾನಗಳ ಪೈಕಿ ಕಾಂಗ್ರೆಸ್ 64 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತಾರೂಢ ಬಿಆರ್‌ಎಸ್ 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 8 ಸ್ಥಾನಗಳಲ್ಲಿ ಮುಂದಿದೆ.