ನ್ಯೂಸ್

ಗ್ರಾಮೀಣ ಜನತೆಗೆ ಬೀಳಲಿದೆ ತೆರಿಗೆ ಬರೆ?; ಮೂಲಸೌಕರ್ಯ ಅಭಿವೃದ್ಧಿಯ ನೆಪ, 6 ಹಳ್ಳಿಗಳಲ್ಲಿ ಪ್ರಾಯೋಗಿಕ ಜಾರಿ

| ವಿಲಾಸ ಮೇಲಗಿರಿ ಬೆಂಗಳೂರು

ಕರೊನಾ ಸಂಕಷ್ಟದ ಕಾಲದಲ್ಲಿ ಆರ್ಥಿಕವಾಗಿ ಜಝುರಿತಗೊಂಡಿರುವ ಗ್ರಾಮೀಣ ಜನರ ಮೇಲೆ ಮೂಲಸೌಕರ್ಯ ಅಭಿವೃದ್ಧಿ ನೆಪದಲ್ಲಿ ಪರೋಕ್ಷವಾಗಿ ತೆರಿಗೆ ಹೊರೆ ಹೊರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿ ತೆರಿಗೆ, ದರ ಮತ್ತು ಶುಲ್ಕಗಳು) ತಿದ್ದುಪಡಿ ಕಾಯ್ದೆಯ ಕರಡು ನಿಯಮಗಳನ್ನು ಆಯ್ದ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸಿದ್ಧತೆ ನಡೆದಿದೆ. ಹಳ್ಳಿಗಳಲ್ಲಿ ಕಾಲಕಾಲಕ್ಕೆ ಮೂಲಸೌಕರ್ಯ ಒದಗಿಸಲು ಗ್ರಾ.ಪಂಗಳಲ್ಲಿ ಸ್ವಂತ ಸಂಪನ್ಮೂಲ ಕ್ರೋಢೀಕರಿಸಿ ಬಲವರ್ಧನೆ ಮಾಡಲು ತೆರಿಗೆ ಹೆಚ್ಚಳ ಅನಿವಾರ್ಯ ಎಂಬುದು ಸರ್ಕಾರದ ನಿಲುವು. ಜನರ ತೊಂದರೆ ಮನಗಂಡು ಉಡುಪಿ ಜಿಲ್ಲೆ ಅಲೆವೂರು ಗ್ರಾಪಂ ಶೇ.10 ತೆರಿಗೆ ಕಡಿತ ಮಾಡಿದೆ. ಅದೇ ರೀತಿ ಬೇರೆ ಬೇರೆ ಗ್ರಾ.ಪಂಗಳೂ ತೆರಿಗೆ ಭಾರ ಇಳಿಸಿವೆ. ಇಂತಹ ಸಂದರ್ಭದಲ್ಲಿ ತೆರಿಗೆ ಹೊರೆ ಹೇರುವ ಸರ್ಕಾರದ ಪ್ರಾಯೋಗಿಕ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಎಲ್ಲೆಲ್ಲಿ ಜಾರಿ?: ಬೆಳಗಾವಿ ಜಿಲ್ಲೆ ಖಲಕಾಂಬ, ಕಲಬುರಗಿ ಜಿಲ್ಲಿ ಭೀಮಳ್ಳಿ, ಶಿವಮೊಗ್ಗ ಜಿಲ್ಲೆ ಕೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಹಳ್ಳಿ, ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚೌಡಪ್ಪನಹಳ್ಳಿ, ವಿಜಯಪುರ ಜಿಲ್ಲೆ ಕಾಳಗಿ ಗ್ರಾ.ಪಂ.ವ್ಯಾಪ್ತಿಯ ಚಲಮಿ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಲಿದೆ. ಈ ಗ್ರಾಮಗಳಲ್ಲಿ ತೆರಿಗೆ ಸಂಗ್ರಹಣೆಯ ಸಾಧಕ-ಬಾಧಕ ನೋಡಿ ನಂತರ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತಿದೆ.

ಕುಡಿಯುವ ನೀರಿಗೂ ಶುಲ್ಕ!: ಉದ್ದೇಶಿತ ತೆರಿಗೆ ಹೇರಿಕೆ ಪ್ರಸ್ತಾವದಲ್ಲಿ ಕುಡಿಯುವ ನೀರಿಗೂ ಶುಲ್ಕ ತೆರಬೇಕಿದೆ. ವಿಚಿತ್ರವೆಂದರೆ ಸಾರ್ವಜನಿಕ ನಲ್ಲಿ ನೀರು ಬಳಸುವ ಪ್ರತಿ ಮನೆಯಿಂದ ಮಾಸಿಕ 100 ರೂ. ಶುಲ್ಕ ವಸೂಲು ಮಾಡಲು ನಿರ್ಧರಿಸಲಾಗಿದೆ. 0-10 ಕಿಲೋ ಲೀಟರ್(1 ಕಿಲೋ ಲೀಟರ್=1000 ಲೀ.) ವಸತಿಗೆ ತಿಂಗಳಿಗೆ 80 ರೂ. ವಸತಿಯೇತರ ಉಪಯೋಗಕ್ಕೆ 100 ರೂ., ವಸತಿಗೆ 10-25 ಕಿಲೋ ಲೀ.ಗೆ 95, ವಸತಿಯೇತರಕ್ಕೆ 120 ರೂ., 20 ಕಿಲೋ ಲೀ.ಗೂ ಮೇಲ್ಪಟ್ಟು ನೀರು ಬಳಕೆಗೆ 115 ರೂ., ವಸತಿಯೇತರ ಉಪಯೋಗಕ್ಕೆ 145 ರೂ. ನಿಗದಿಪಡಿಸಲಾಗಿದೆ.

ತೆರಿಗೆ ಹೆಚ್ಚಳವಷ್ಟೇ ಉದ್ದೇಶವಲ್ಲ. ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ 2021ರ ತಿದ್ದುಪಡಿ ಕರಡು ನಿಯಮಗಳನ್ನು ಜಾರಿಗೊಳಿಸಿದರೆ ತೆರಿಗೆಯಲ್ಲಿ ಯಾವ ವ್ಯತ್ಯಾಸ ಬರುತ್ತದೆ ಎಂಬುದನ್ನು ಲೆಕ್ಕಾಚಾರ ಮಾಡಲು ಪ್ರಾಯೋಗಿಕ ಜಾರಿ ಮಾಡಿದ್ದೇವೆ. ತೆರಿಗೆದಾರರಿಗೆ ಕೆಲವು ವಿನಾಯಿತಿಗಳೂ ತಿದ್ದುಪಡಿಯಲ್ಲಿ ದೊರೆಯಲಿವೆ. ವರದಿ ಆಧರಿಸಿ ಸರ್ಕಾರ ತೆರಿಗೆ ಪರಿಷ್ಕರಣೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ.

| ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆಯುಕ್ತೆ, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ.

ಲೈಸೆನ್ಸ್ ಶುಲ್ಕ ದುಬಾರಿ: ಕಟ್ಟಡ ನಿರ್ಮಾಣ ಅನುಮತಿ, ಕಾರ್ಖಾನೆ ನಿರ್ಮಾಣ ಮತ್ತು ಯಂತ್ರೋಪಕರಣ, ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆ ಅನುಮತಿ ಶುಲ್ಕ, ವಾಣಿಜ್ಯ, ವಸತಿಯೇತರ ವ್ಯವಹಾರ ಲೈಸೆನ್ಸ್ ಶುಲ್ಕ, ನಿರಾಕ್ಷೇಪಣಾ ಪತ್ರ ಶುಲ್ಕ, ಆಸ್ತಿ ಸಮೀಕ್ಷೆಯಲ್ಲಿ ಬಳಸುವ ಆಸ್ತಿ ಮತ್ತು ಆಸ್ತಿ ತೆರಿಗೆ ನಮೂನೆ ಶುಲ್ಕ, ಇ-ಸ್ವತ್ತು ಹಾಗೂ ಬಾಪೂಜಿ ಸೇವಾ ಕೇಂದ್ರದ ಮೂಲಕ ನೀಡುವ ಸೇವಾ ಶುಲ್ಕ, ಆಸ್ತಿ ವಿವರ ವಹಿಯಲ್ಲಿ ಹೆಸರು ಸೇರ್ಪಡೆ, ಬದಲಾವಣೆ ಶುಲ್ಕ, ಬಡಾವಣೆ ನಕ್ಷೆ ಅನುಮೋದನೆಗಾಗಿ ಪರಿಶೀಲನಾ ಶುಲ್ಕ, ಬಡಾವಣೆ ಅಭಿವೃದ್ಧಿ ಶುಲ್ಕ, ಕಾನೂನು ಬಾಹಿರ ಕಟ್ಟಡಗಳಲ್ಲಿನ ಅನುಮತಿ ಅಥವಾ ಲೈಸೆನ್ಸ್ ಅಥವಾ ನವೀಕರಣ ಶುಲ್ಕ, ನೈರ್ಮಲ್ಯ ಶುಲ್ಕ, ಸಂತೆ ಶುಲ್ಕ...ಹೀಗೆ ನಾನಾ ರೀತಿ ಶುಲ್ಕ ಪರಿಷ್ಕರಿಸಲಾಗಿದೆ. ಕುಡಿಯುವ ನೀರು, ಬೀದಿ ದೀಪ, ಖಾಲಿ ಜಮೀನು, ನಿವೇಶನ, ವಸತಿ ಕಟ್ಟಡ, ವಾಣಿಜ್ಯ ಕಟ್ಟಡ, ವಸತಿಯೇತರ ಕಟ್ಟಡ, ಕೈಗಾರಿಕೆ ಕಟ್ಟಡ, ಕೃಷಿ ಆಧಾರಿತ ಉತ್ಪಾದನಾ ಘಟಕಗಳ ಕಟ್ಟಡ, ನಿರ್ವಿುತ ಪ್ರದೇಶಗಳ ಮೇಲೆ ತೆರಿಗೆ ಹಾಕಲಾಗುತ್ತದೆ.

ಕರೊನಾ ಸಂಕಷ್ಟದಲ್ಲಿ ಗ್ರಾ.ಪಂ ಹಂತದಲ್ಲಿ ತೆರಿಗೆ ಹೆಚ್ಚಿಸುವ ಪರೋಕ್ಷ ಪ್ರಯತ್ನ ಸರಿಯಲ್ಲ. ಪ್ರಾಯೋಗಿಕವಾದರೂ ಈ ಹಂತದಲ್ಲಿ ಯಶಸ್ಸು ಕಾಣುವುದು ಕಷ್ಟ. ಸರ್ಕಾರ ಆಯಾ ಗ್ರಾ.ಪಂಗಳೇ ತೆರಿಗೆ ಏರಿಕೆ/ಇಳಿಕೆ ನಿರ್ಧಾರ ಕೈಬಿಡಬೇಕು. ಸರ್ಕಾರದ ಅತಿಯಾದ ಹಸ್ತಕ್ಷೇಪ ಸಲ್ಲದು.

| ಕಾಡಶೆಟ್ಟಿಹಳ್ಳಿ ಸತೀಶ್ ರಾಜ್ಯ ಸಂಚಾಲಕರು, ಕರ್ನಾಟಕ ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟ

ಯಾವುದಕ್ಕೆ ಎಷ್ಟು ತೆರಿಗೆ?

ಖಾಲಿ ಜಮೀನು/ನಿವೇಶನ: ಪರಿವರ್ತನೆಯಾದ ಖಾಲಿ ಜಮೀನು/ಖಾಲಿ ನಿವೇಶನಕ್ಕೆ ಮಾರ್ಗಸೂಚಿ ಮಾರುಕಟ್ಟೆ ಮೌಲ್ಯ ಆಧರಿಸಿ ಶೇ. 0.10, ಶೇ. 0.05, ಶೇ.0.02 (ಮಾರ್ಗಸೂಚಿ ಮಾರುಕಟ್ಟೆ ಮೌಲ್ಯ ಚ.ಮೀ.ಗೆ 9001ಕ್ಕಿಂತ ಹೆಚ್ಚಿರುವ ಖಾಲಿ ಜಮೀನು/ನಿವೇಶನಕ್ಕೆ) ಇದೇ ರೀತಿ ಮಾರುಕಟ್ಟೆ ಮೌಲ್ಯ ಆಧರಿಸಿ ತೆರಿಗೆ ದರ ನಿಗದಿಪಡಿಸಲಾಗಿದೆ.

ವಸತಿ, ವಾಣಿಜ್ಯ ಕಟ್ಟಡ: ವಸತಿ, ವಾಣಿಜ್ಯ, ವಸತಿಯೇತರ, ಕೃಷಿ ಆಧಾರಿತ ಉತ್ಪಾದನಾ ಘಟಕದ ಕಟ್ಟಡಗಳಾದ ಆರ್​ಸಿಸಿ, ಛಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಬಾಗಿಲುಗಳು(ವಸತಿ) ಇದ್ದರೆ ಶೇ.0. 10, ವಾಣಿಜ್ಯ 0.50, ವಸತಿಯೇ ಶೇ.0.40, ಕೃಷಿ ಆಧಾರಿತ ಉತ್ಪಾದನಾ ಘಟಕಗಳ ಕಟ್ಟಡ ಶೇ.0.30 ತೆರಿಗೆ ದರ ಹೆಚ್ಚಳವಾಗಲಿದೆ.

ಅಪಾರ್ಟ್​ವೆುಂಟ್: ಅಪಾರ್ಟ್​ವೆುಂಟ್/ ಫ್ಲಾಟ್/ ವಿಲ್ಲಾಮೆಂಟ್/ ಟೆನಮೆಂಟ್/ಬಹುಮಾಲೀಕತ್ವದ ಕಟ್ಟಡಗಳ ಮೂಲ ಮೌಲ್ಯದ ಮೇಲೆ ಮಾರ್ಗಸೂಚಿ ಮಾರುಕಟ್ಟೆ ಮೌಲ್ಯ ಆಧರಿಸಿ ಶೇ.0.10 ರಿಂದ ಶೇ.0.50 ರವರೆಗೆ ತೆರಿಗೆ ದರ ಹೆಚ್ಚಳವಾಗಲಿದೆ.

ಐಟಿ/ಬಿಟಿ ಪಾರ್ಕ್ ಇತರ: ಕೈಗಾರಿಕೆ, ಕಾರ್ಖಾನೆ, ಐಟಿ ಪಾರ್ಕ್, ಹಾರ್ಡ್​ವೇರ್ ಪಾರ್ಕ್, ಟೆಕ್ಸ್ ಟೈಲ್ ಪಾರ್ಕ್, ಬಯೋಟೆಕ್ ಪಾರ್ಕ್, ಇತರ ಕಟ್ಟಡಗಳ ಮೂಲ ಮೌಲ್ಯದ ಮೇಲೆ ತೆರಿಗೆ ದರ ನಿಗದಿಪಡಿಸಲಾಗಿದೆ. ಇದರ ಜತೆಗೆ ಕಟ್ಟಡಗಳ ವಾರ್ಷಿಕ ಸವಕಳಿ ದರ ಆಧರಿಸಿ ತೆರಿಗೆ ನಿಗದಿ ಆಗಲಿದೆ.

ಬಾಕಿ ವಸೂಲಿಗೆ ಕ್ರಮ: ಪಿಡಿಒಗಳು ತೆರಿಗೆ ಬಾಕಿದಾರರಿಗೆ ತಗಾದೆ ಬಿಲ್, ತಗಾದೆ ಆದೇಶ, ಜಪ್ತಿ ವಾರಂಟ್ ಹೊರಡಿಸಿ ಬಾಕಿ ವಸೂಲು ಮಾಡುವ ಪ್ರಕ್ರಿಯೆ ಕಾರ್ಯಗತಗೊಳಿಸುವಂತೆಯೂ ಸ್ಪಷ್ಟಪಡಿಸಲಾಗಿದೆ.

ವರದಿ ಸಲ್ಲಿಕೆಗೆ ಸೂಚನೆ: ಆಯ್ದ 6 ಗ್ರಾಮಗಳಲ್ಲಿ ಗ್ರಾ.ಪಂ ತೆರಿಗೆ, ದರ ಮತ್ತು ಶುಲ್ಕ ಕರಡು ನಿಯಮಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿ ಜು.31ರ ಒಳಗೆ ಸರ್ಕಾರಕ್ಕೆ ಸಲ್ಲಿಸಲು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ತೆರಿಗೆ ಏರಿಕೆಯೇ ಇಲ್ಲ: 4 ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಿಸಬೇಕೆಂಬ ನಿಯಮವಿದೆ. ಆದರೆ, ಅನೇಕ ಪಂಚಾಯಿತಿಗಳಲ್ಲಿ ತೆರಿಗೆ ಪರಿಷ್ಕರಣೆ ನಡೆಯುವುದಿಲ್ಲ. ಕೆಲವು ಚುನಾಯಿತ ಪ್ರತಿನಿಧಿಗಳು ತೆರಿಗೆ ಏರಿಕೆಗೆ ಅವಕಾಶ ಮಾಡಿಕೊಡುವುದಿಲ್ಲ. ಅಲ್ಲದೆ, ತೆರಿಗೆ ವಸೂಲಿಗೂ ಅಡ್ಡಿಪಡಿಸುವ ಉದಾಹರಣೆಗಳೂ ಸಾಕಷ್ಟಿವೆ. ಹಾಗಾಗಿ ಗ್ರಾ.ಪಂಗಳು ರಾಜ್ಯ,ಕೇಂದ್ರ ಸರ್ಕಾರದ ಅನುದಾನದ ಮೇಲೆ ಅವಲಂಬಿತವಾಗಿವೆ.