ದಿಸ್ಪುರ: ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ (86) ಅವರು ಸೋಮವಾರ ನಿಧನರಾಗಿದ್ದಾರೆ. ಕರೊನಾ ಸೋಂಕಿಗೆ ತುತ್ತಾಗಿದ್ದ ಅವರಿಗೆ ಕರೊನಾದಿಂದ ಗುಣಮುಖರಾದ ನಂತರ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಗುವಾಹಟಿಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ತರುಣ್ ಅವರು ಬಹು ಅಂಗಾಂಗ ವೈಫಲ್ಯ ಕಾರಣದಿಂದಾಗಿ ಮೃತರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸೋಮವಾರ ಸಂಜೆ 5.35ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ. ಕಾಂಗ್ರೆಸ್ನ ಜನಪ್ರಿಯ ನಾಯಕರಾಗಿದ್ದ ಅವರು ಮೂರು ಬಾರಿ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದ ಅಧಿಕಾರ ನಿರ್ವಹಿಸಿದ್ದರು. ಆರು ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಅತಿ ಹೆಚ್ಚು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದವರಾಗಿ ಹೆಸರಾಗಿದ್ದರು.
ಆಗಸ್ಟ್ 25ರಂದು ತರುಣ್ ಗೊಗೊಯ್ ಅವರಿಗೆ ಕರೊನಾ ಸೋಂಕು ದೃಢವಾಗಿತ್ತು. ಎರಡು ತಿಂಗಳ ಸತತ ಚಿಕಿತ್ಸೆಯ ನಂತರ ಅಕ್ಟೋಬರ್ 25ರಂದು ಕರೊನಾ ನೆಗಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಅದಾದ ನಂತರ ಅನೇಕ ಸಮಸ್ಯೆಗಳು ಕಾಣಿಸಿಕೊಂಡಿದ್ದು, ನವೆಂಬರ್ 2ರಂದು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ರಾತ್ರಿಯಿಂದ ಅವರ ಆರೋಗ್ಯ ಹದಗೆಟ್ಟಿದ್ದಾಗಿ ತಿಳಿಸಲಾಗಿತ್ತು.