ನ್ಯೂಸ್

ರಾಜಕೀಯ ನಿವೃತ್ತಿ ಘೋಷಿಸಿದ ತನ್ವೀರ್ ಸೇಠ್; ಮನನೊಂದು ಪ್ರಾಣ ಕಳೆದುಕೊಳ್ಳಲು ಮುಂದಾದ ಅಭಿಮಾನಿ

ಮೈಸೂರು: ನಾನು ಅನಾರೋಗ್ಯ ಪೀಡಿತನಾಗಿದ್ದು, ಹೀಗಾಗಿ ಚುನಾವಣೆಗೆ ಸ್ಫರ್ಧಿಸುವುದಿಲ್ಲ. ಹೀಗಾಗಿ ರಾಜಕೀಯದಿಂದ ನಿವೃತ್ತಿ ಬಯಸಿದ್ದೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್​ಗ ತನ್ವೀರ್ ಸೇಠ್ ಶಾಕ್ ನೀಡಿದ್ದು, ಜನ ನನ್ನನ್ನು 5 ಬಾರಿ ಗೆಲ್ಲಿಸಿದ್ದಾರೆ. ನರಸಿಂಹ ರಾಜ ಕ್ಷೇತ್ರದ ಮತದಾರರ ಋಣ ತೀರಿಸಬೇಕಿದೆ. ಕಾಂಗ್ರೆಸ್ ಪಕ್ಷ ನನಗೆ ಹಲವಾರು ಅವಕಾಶ ನೀಡಿದೆ. ಯಾವುದೇ ಬೆಳವಣಿಗೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದು ನನ್ನ ನಿರ್ಧಾರ ಎಂದು ಹೇಳಿದ್ದಾರೆ.

ನನ್ನ ನಿರ್ಧಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಪಕ್ಷದ ವರಿಷ್ಠರು ಏನೇ ತೀರ್ಮಾನ ಮಾಡಿದರೂ ಅದಕ್ಕೆ ನನ್ನ‌ ಸಹಮತ ಇದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು. 

ಶಾಸಕ ತನ್ವೀರ್ ಸೇಠ್ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ಮನೆ ಮುಂದೆ ಹಾಜರಾಗಿದ್ದಾರೆ. ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ.

ಇದೇ ವೇಳೆ ತನ್ವೀರ್ ಸೇಠ್ ಅಭಿಮಾನಿ ರಸುಲ್ ಎಂಬಾತ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದೆ. ಕೂಡಲೇ ಉದಯಗಿರಿ ಠಾಣೆ ಪೊಲೀಸರು ಬಾಟಲಿ ಕಿತ್ತೆಸೆದಿದ್ದು, ಅಭಿಮಾನಿಗಳು ನೀರು ಸುರಿದು ಸಮಾಧಾನ ಪಡಿಸಿದ್ದಾರೆ.