ನ್ಯೂಸ್

ಪ್ಯಾಸೆಂಜರ್ ಇಳಿಸಲು ನಿಲ್ಲಿಸಿದ್ದ ಬಸ್ಸಿಗೆ ಕಾರು ಡಿಕ್ಕಿ: ಪ್ರಯಾಣಿಕ ಸೇರಿ ಐವರು ದುರ್ಮರಣ!

ಈರೋಡ್​ (ತಮಿಳುನಾಡು): ಬೆಳ್ಳಂಬೆಳಗ್ಗೆ ಈರೋಡ್​ನ ಕಾವೇರಿಪಟ್ಟಣಂ ಬಳಿ ಕಾರು ಮತ್ತು ಸರ್ಕಾರಿ ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ತಮಿಳುನಾಡು ಸರ್ಕಾರಿ ಬಸ್​ಗೆ ಹಿಂಬದಿಯಿಂದ ಬಂದು ಓಮ್ನಿ ಕಾರು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಬೆಳಗ್ಗೆ 4 ಗಂಟೆಯಲ್ಲಿ ಅಪಘಾತ ನಡೆದಿರುವುದಾಗಿ ವರದಿಯಾಗಿದೆ. ಈರೋಡ್ ಜಿಲ್ಲೆಯ ಭವಾನಿಯಿಂದ ಸ್ನೇಹಿತರು ಬೆಂಗಳೂರಿನ ಒಂಡರ್ಲಾಗೆ ಹೊರಟಿದ್ದರು.

ಪ್ಯಾಸೆಂಜರ್ ಇಳಿಸಲು ನಿಲ್ಲಿಸಿದ್ದ ಬಸ್ಸಿಗೆ ಕಾರು ಡಿಕ್ಕಿ ಹೊಡೆದಿದೆ. ಬಸ್ಸಿನಿಂದ ಇಳಿಯುತ್ತಿದ್ದ ಓರ್ವ ಪ್ರಯಾಣಿಕ ಹಾಗೂ ಓಮ್ನಿಯಲ್ಲಿದ್ದ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಶಾಂತ್, ಲಿಂಗಾ, ಸುರೇಂದರ್, ಶಿವಕುಮಾರ್ ಹಾಗೂ ಬಸ್ ಪ್ಯಾಸೆಂಜರ್ ದೇವರಾಜು ಮೃತ ದುರ್ದೈವಿಗಳು.

ಓಮ್ನಿಯಲ್ಲಿದ್ದ ಗೌತಮ್, ಭರಣಿ ಹಾಗೂ ಅಶೋಕ್ ಎಂಬುವರಿಗೆ ತೀವ್ರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಓಮ್ನಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಕಾವೇರಿಪಟ್ಟಣಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)