ನ್ಯೂಸ್

ಅಪಘಾತದಲ್ಲಿ ಮೃತಪಟ್ಟ ಹೆಬ್ಬಾವಿಗೆ ಅಂತ್ಯಸಂಸ್ಕಾರ: ಗ್ರಾಮಸ್ಥರ ಮಾತು ಕೇಳಿದ್ರೆ ಫಿದಾ ಗ್ಯಾರೆಂಟಿ!

ಚೆನ್ನೈ: ರಸ್ತೆ ಅಪಘಾತದಲ್ಲಿ ಸಾವಿಗೀಡಾದ 12 ಅಡಿ ಉದ್ದ ಹೆಬ್ಬಾವಿಗೆ ಅಂತಿಮ ಸಂಸ್ಕಾರ ನೆರವೇರಿಸಿದ ವಿರಾಳಾತಿವಿರಳ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.

ಶನಿವಾರ ಬೆಳಗ್ಗೆ ರಸ್ತೆ ದಾಟುವಾಗ ಹೆಬ್ಬಾವಿನ ಮೇಲೆ ಟ್ರಕ್​ವೊಂದು ಹರಿದ ಪರಿಣಾಮ ಹಾವು ಮೃತಪಟ್ಟಿದೆ. ಈ ಘಟನೆ ಕೃಷ್ಣಗಿರಿ ಜಿಲ್ಲೆಯ ಬಾರ್ಗೂರ್​ ಬಳಿಯಿರುವ ನಾದರ್​ ಕೊಟ್ಟಾಯ್​ನ ರಸ್ತೆಯಲ್ಲಿ ನಡೆದಿದೆ. ಹಾವು ಸಾವಿಗೀಡಾಗಿದ್ದನ್ನು ರಸ್ತೆಯಲ್ಲಿ ನಿಂತು ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಂಡರೆ, ಕೆಲವರು ಸುಮ್ಮನೆ ನೋಡುತ್ತಾ ತೆರಳಿದರು. ಆದರೆ, ಪಕ್ಕದ ಗ್ರಾಮದವರು ಹಾವು ಮೃತಪಟ್ಟಿರುವುದನ್ನು ಗಮನಿಸಿ ಅದಕ್ಕೆ ಅಂತಿಮ ಸಂಸ್ಕಾರ ನಡೆಸಿಕೊಟ್ಟರು.

ಸತ್ತ ಹಾವಿಗೆ ಬಿಳಿಯ ಬಟ್ಟೆ ಹೊದಿಸಿ, ಹೂವಿನ ಹಾರ ಹಾಕಿ ಮೆರವಣಿಗೆ ನಡೆಸಿದ ಗ್ರಾಮಸ್ಥರು ಮೃತ ವ್ಯಕ್ತಿಗಳಿಗೆ ಮಾಡುವಂತೆಯೇ ಎಲ್ಲ ವಿಧಿವಿಧಾನಗಳನ್ನು ಮಾಡಿ ಹಾವಿನ ಅಂತ್ಯಸಂಸ್ಕಾರ ನಡೆಸಿದರು. ಇದಕ್ಕೂ ಮುನ್ನ ಹಾವಿನ ಮೇಲೆ ರೋಸ್​ ವಾಟರ್​ ಸಹ ಸಿಂಪಡಿಸಲಾಯಿತು.

ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಹ ವೈರಲ್​ ಆಗಿದೆ. ಇನ್ನು ಹೆಬ್ಬಾವಿಗೆ ಅಂತ್ಯಸಂಸ್ಕಾರ ನಡೆಸುವಂತಹ ಘಟನೆ ತುಂಬಾ ವಿರಳ. ಇದೇ ಮೊದಲ ಬಾರಿಗೆ ಗ್ರಾಮಸ್ಥರು ಇದನ್ನು ನೆರವೇರಿಸಿದ್ದು, ಮೂಕ ಪ್ರಾಣಿಗಳು ಸಹ ಒಂದು ಜೀವಿಯಾಗಿದ್ದು ಅದಕ್ಕೆ ಗೌರವ ಸಲ್ಲಿಸಬೇಕಾದ್ದು ಮಾನವೀಯತೆ ಎನ್ನುತ್ತಾರೆ ಕೃಷ್ಣನ್​ ಹೆಸರಿನ ಗ್ರಾಮಸ್ಥ. ಸದ್ಯ ಗ್ರಾಮಸ್ಥರ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್​)