ನ್ಯೂಸ್

ಮತಗಟ್ಟೆಗೆ ಸೈಕಲ್ ಮೇಲೆ ತೆರಳಿದ್ದರ ಹಿಂದಿನ ಸತ್ಯ ಹೇಳಿದ ನಟ ವಿಜಯ್

ಚೆನ್ನೈ: ಇಂದು ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಾರ್ವತ್ರಿಕ ಮತದಾನ ಜರುಗಿತು. ಆದರೆ, ಹೆಚ್ಚು ಸುದ್ದಿ ಮಾಡಿದ್ದು ತಮಿಳು ನಟ ವಿಜಯ್ ಅವರು ಸೈಲಕ್​​ನಲ್ಲಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದು.

ವಿಜಯ್ ಅವರು ಮನೆ ಹತ್ತಿರದ ನಿಲಂಗರೈ ಮತಗಟ್ಟೆಗೆ ಸೈಕಲ್ ಮೇಲೆ ತೆರಳುವುದು ಭಾರೀ ವೈರಲ್ ಆಗಿತ್ತು. ಹಲವರು ಇದಕ್ಕೆ ತಮ್ಮದೇಯಾದ ಅರ್ಥ ಕಲ್ಪಿಸಿದರು. ಅದರಲ್ಲೂ ಬಹಳಷ್ಟು ಜನ, ಕೇಂದ್ರ ಸರ್ಕಾರವನ್ನು ಹಣಿಯಲು ಈ ವಿಷಯವನ್ನು ಆಯ್ಕೆ ಮಾಡಿಕೊಂಡರು.

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿರುವುದನ್ನು ಸೈಕಲ್ ಮೇಲೆ ಮತಗಟ್ಟೆಗೆ ತೆರಳಿ ವಿಜಯ್ ಸಾಂಕೇತಿಕವಾಗಿ ವಿರೋಧಿಸಿದ್ದಾರೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದವು. ಬಹುತೇಕ ಎಲ್ಲರೂ ಇದೇ ಅಭಿಪ್ರಾಯವನ್ನು ಮಂಡಿಸಿದರು. ವಿಜಯ್ ಮಾತ್ರ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡದೇ ಮನೆಗೆ ವಾಪಸ್ ಹೋಗುವಾಗ ಅಭಿಮಾನಿಗಳ ಕಿರಿ ಕಿರಿ ತಾಳದೇ ಸ್ನೇಹಿರ ಬೈಕ್ ಒಂದರಲ್ಲಿ ಮನೆಗೆ ತೆರಳಿದ್ದರು.

ಅವರು ಸೈಕಲ್ ಮೇಲೆ ಮತಗಟ್ಟೆಗೆ ಹೋದ ಸಂಗತಿ ಭಾರೀ ವೈರಲ್ ಆಗಿದ್ದರ ಬಗ್ಗೆ ಮಂಗಳವಾರ ಸಂಜೆ ಅವರೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ತೆರೆ ಎಳೆದಿದ್ದಾರೆ. ನನ್ನ ಮತಗಟ್ಟೆ ಕೇಂದ್ರ ಇಕ್ಕಟ್ಟಾದ ಸ್ಥಳದಲ್ಲಿದೆ. ಅಲ್ಲಿಗೆ ಹೋಗುವ ರಸ್ತೆಯೂ ಇಕ್ಕಟ್ಟಾಗಿದೆ. ಕಾರ್​ ತೆಗೆದುಕೊಂಡು ಹೋದರೆ ಪಾರ್ಕಿಂಗ್ ಸಮಸ್ಯೆ ಆಗಬಹುದು ಎಂದು ಸೈಕಲ್ ಮೇಲೆ ತೆರಳಿ ಮತ ಚಲಾಯಿಸಿ ಬಂದೆ. ಇದರ ಹಿಂದೆ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೇನ್ಸಿಸ್).