ನ್ಯೂಸ್

VIDEO | ಬಸ್ ಸ್ಟೇರಿಂಗ್, ಬ್ರೇಕ್​ಗೆ ಮುತ್ತಿಟ್ಟು ಕಣ್ಣೀರು ಹಾಕಿದ ಬಸ್​​ ಚಾಲಕ!

ಮಧುರೈ: ಕೆಲವು ವಸ್ತು ಹಾಗೂ ವ್ಯಕ್ತಿಗಳ ಮೇಲೆ ಪ್ರೀತಿಯಾದರೆ ಅವುಗಳನ್ನು ಕಳೆದುಕೊಳ್ಳುವುದು ತುಂಬಾ ಕಷ್ಟವಾಗಿದೆ. ಹೀಗೆ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕನೊಬ್ಬ ನಿವೃತ್ತಿಯಾಗುವ ಮುನ್ನ ತನ್ನ ಕೆಲಸದ ಕೊನೆಯ ದಿನದಂದು ಭಾವುಕನಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಧುರೈ ಜಿಲ್ಲೆಯ ಮುತ್ತುಪಾಂಡಿ (60) ಎಂಬ ವ್ಯಕ್ತಿ ಬಸ್​ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ನಿವೃತ್ತಿಯಾಗುವ ಹಿನ್ನೆಲೆಯಲ್ಲಿ ಬಸ್ಸಿನ ಸ್ಟೇರಿಂಗ್ ಚಕ್ರಕ್ಕೆ ಮುತ್ತಿಟ್ಟು ತನ್ನ ಅಳಲು ತೋಡಿಕೊಂಡಿದ್ದು, ಮೂರು ದಶಕಗಳಿಂದ ತಾನು ಮಾಡುತ್ತಿರುವ ಉದ್ಯೋಗದ ಕುರಿತಾಗಿ ಒರುವ ಪ್ರೀತಿ ಎಷ್ಟು ಅಗಾಧವಾಗಿದೆ ಎಂದು ತೋರಿಸುತ್ತದೆ.

ಮುತ್ತುಪಾಂಡಿ ಅವರು, ಮಧುರೈ ಜಿಲ್ಲೆಯ ಅನುಪಾನಡಿ-ತಿರುಪರಂಗುನ್ರಂ-ಮಹಾಲಕ್ಷ್ಮಿ ಕಾಲೋನಿ ಮಾರ್ಗದಲ್ಲಿ ಬಸ್ ಓಡಿಸುತ್ತಿದ್ದರು. ಮುತ್ತುಪಾಂಡಿ ಕೆಲಸದ ಕೊನೆಯ ದಿನದಂದು ಅವರು ಮಹಾಲಕ್ಷ್ಮಿ ಕಾಲೋನಿಗೆ ಬಸ್​​ ಚಲಾಯಿಸಿಕೊಂಡು ಹೋಗುವಾಗ ಕಣ್ಣೀರು ಸುರಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಕೊನೆಯ ಬಾರಿಗೆ ಬಸ್ಸನ್ನು ನೋಡುತ್ತಾ ಅಳುತ್ತಾರೆ. ಸ್ಟೇರಿಂಗ್, ಚಕ್ರ, ಕ್ಲಚ್, ಗೇರ್, ಬ್ರೇಕ್.. ಹೀಗೆಲ್ಲ ಮುತ್ತಿಕ್ಕಿ ನಮಸ್ಕರಿಸಿ ಬಸ್ಸಿನಿಂದ ಕೆಳಗಿಳಿದರು. ಬಸ್​​ ಬೋರ್ಡಿಗೆ ನಮಸ್ಕರಿಸಿ ಬಸ್ಸಿನ ಮುಂದೆ ಬಂದು ಎರಡು ಕೈಗಳಿಂದ ಬಸ್ಸನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ.

''ಸಮಾಜದಲ್ಲಿ ನನಗೆ ಈ ವೃತ್ತಿ ಗೌರವ ತಂದುಕೊಟ್ಟಿದೆ. ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮತ್ತು ನನ್ನ ಹೆತ್ತವರು ಮತ್ತು ಹೆಂಡತಿಯನ್ನು ನೋಡಿಕೊಳ್ಳಲು ಸಾಧ್ಯವಾಯಿತು, ”ಎಂದು ಮುತ್ತುಪಾಂಡಿ ಹೇಳಿದರು.

ತಮ್ಮ ಸೇವಾವಧಿಯಲ್ಲಿ ಪ್ರಯಾಣಿಕರು ಹಾಗೂ ಇತರರೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದರು ಎಂದು ಸಹೋದ್ಯೋಗಿಗಳು ಹೊಗಳಿದರು.