Tamannaah in ‘Jailer 2’: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾ ನೋಡೋಕೆ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ. ಅಕ್ಟೋಬರ್ 15, 2026ರಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ನಡುವೆ ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ‘ಜೈಲರ್ 2’ನಲ್ಲಿ ತಮನ್ನಾ ಭಾಟಿಯಾ ಅವರಿಗೊಂದು ಹಾಡು ಇರಬೇಕು ಅಂತ ಸ್ವತಃ ರಜನಿಕಾಂತ್ ನಿರ್ದೇಶಕ ನೆಲ್ಸನ್‌ಗೆ ಹೇಳಿದ್ದರಂತೆ!
‘ಜೈಲರ್ 2’ ಸಿನಿಮಾ ಪ್ರಚಾರದ ವೇಳೆ ರಜನಿಕಾಂತ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ಜೈಲರ್ 2ನಲ್ಲಿ ಒಂದೇ ಒಂದು ಕೊರತೆ ಇದೆ. ಅದೇ ತಮನ್ನಾ. ಅವರಿಗಾಗಿ ಒಂದು ಹಾಡು ಇಡಿ ಅಂತ ನಾನು ನೆಲ್ಸನ್‌ಗೆ ಹೇಳಿದ್ದೆ’ ಎಂದು ರಜನಿಕಾಂತ್ ಹೇಳಿದ್ದಾರೆ. ಆದರೆ ಇದಕ್ಕೆ ನಿರ್ದೇಶಕ ನೆಲ್ಸನ್ ಕೊಟ್ಟ ಉತ್ತರ ಮಾತ್ರ ಇಂಟರೆಸ್ಟಿಂಗ್ ಆಗಿತ್ತು. ‘ನಿಮಗೆ ಇಷ್ಟ ಅಂತ ಒಂದೇ ಕಾರಣಕ್ಕೆ ಆ ಹಾಡನ್ನು ಸಿನಿಮಾದಲ್ಲಿ ಇಡೋಕೆ ಆಗಲ್ಲ ಸರ್’ ಎಂದು ನೆಲ್ಸನ್ ಹೇಳಿದ್ದರಂತೆ.
ಇದಕ್ಕೆ ರಜನಿಕಾಂತ್ ಕೂಡ ತಕ್ಷಣವೇ ಉತ್ತರ ಕೊಟ್ಟಿದ್ದಾರೆ. ‘ನನಗೆ ಇಷ್ಟ ಅಂತ ನಾನು ಹೇಳಿಲ್ಲ. ನಾನು ಇಷ್ಟಪಟ್ಟಿದ್ದನ್ನೆಲ್ಲ ಮಾಡ್ತಾ ಹೋಗಿದ್ದರೆ, ಇಷ್ಟೊತ್ತಿಗೆ ನನ್ನ ಪ್ರಭಾವ ಕಡಿಮೆಯಾಗಿ ಬೆಂಗಳೂರಿಗೆ ಹೋಗಿರುತ್ತಿದ್ದೆ. ಇವತ್ತಿಗೂ ನಾನು ಚಿತ್ರರಂಗದಲ್ಲಿ ಇರೋದಕ್ಕೆ ಕಾರಣ, ಪ್ರೇಕ್ಷಕರಿಗೆ ಏನು ಇಷ್ಟವಾಗುತ್ತೋ ಅದನ್ನೇ ಮಾಡ್ತಿರೋದು’ ಎಂದು ಹೇಳಿದ್ದಾರೆ.
ಅಂದರೆ, ತಮಗೆ ವೈಯಕ್ತಿಕವಾಗಿ ಇಷ್ಟವಾಗುವ ವಿಷಯಕ್ಕಿಂತ ಪ್ರೇಕ್ಷಕರಿಗೆ ಯಾವುದು ಇಷ್ಟವಾಗುತ್ತೆ ಅನ್ನೋದೇ ಮುಖ್ಯ ಅನ್ನೋದು ರಜನಿಕಾಂತ್ ಮಾತಿನ ಅರ್ಥ. ‘ಕಾವಾಲಾ’ ಹಾಡು ಜನರಿಗೆ ಎಷ್ಟು ಇಷ್ಟವಾಗಿತ್ತು ಅನ್ನೋದು ಗೊತ್ತಿದ್ದರಿಂದಲೇ ‘ಜೈಲರ್ 2’ನಲ್ಲೂ ತಮನ್ನಾಗೆ ಒಂದು ಹಾಡು ಇರಲಿ ಅಂತ ಅವರು ಬಯಸಿದ್ದರಂತೆ.
ನೆಲ್ಸನ್ ನಿರ್ದೇಶನದ ‘ಜೈಲರ್ 2’ನಲ್ಲಿ ರಜನಿಕಾಂತ್ ಮತ್ತೊಮ್ಮೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಭಾಗದಲ್ಲಿ ನಟಿಸಿದ್ದ ಕೃಷ್ಣನ್, ಯೋಗಿ ಬಾಬು, ಮಿರ್ನಾ ಮತ್ತು ರಿತ್ವಿಕ್ ಕೂಡ ತಮ್ಮ ಪಾತ್ರಗಳನ್ನು ಮುಂದುವರಿಸಲಿದ್ದಾರೆ. ಇನ್ನು ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ಸೂರಜ್ ವೆಂಜರಮೂಡು, ವಿದ್ಯಾ ಬಾಲನ್, ಅಣ್ಣಾ ರಾಜನ್ ಮತ್ತು ಜತಿನ್ ಸರ್ನಾ ಸೇರಿದಂತೆ ಹಲವು ಕಲಾವಿದರು ಈ ಬಾರಿ ಚಿತ್ರತಂಡ ಸೇರಿಕೊಂಡಿದ್ದಾರೆ.
‘ಜೈಲರ್’ ಮೊದಲ ಭಾಗದಲ್ಲಿ ಮೋಹನ್‌ಲಾಲ್, ಶಿವರಾಜ್‌ಕುಮಾರ್ ಮತ್ತು ಜಾಕಿ ಶ್ರಾಫ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಈಗ ‘ಜೈಲರ್ 2’ನಲ್ಲೂ ಈ ಮೂವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಹೃತಿಕ್ ರೋಷನ್ ಮತ್ತು ವಿಜಯ್ ಸೇತುಪತಿ ಕೂಡ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.
‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಭಾರತದಲ್ಲಿ ಸುಮಾರು 348.55 ಕೋಟಿ ರೂ. ನಿವ್ವಳ ಗಳಿಕೆ ಕಂಡಿದ್ದ ಈ ಸಿನಿಮಾ, ವಿಶ್ವಾದ್ಯಂತ 604.50 ಕೋಟಿ ರೂ. ಗಳಿಸಿತ್ತು. ಬಿಡುಗಡೆಯಾದ ಮೊದಲ ದಿನವೇ ಭಾರತದಲ್ಲಿ ಎಲ್ಲಾ ಭಾಷೆಗಳಿಂದ ಒಟ್ಟು 48.35 ಕೋಟಿ ರೂ. ನಿವ್ವಳ ಕಲೆಕ್ಷನ್ ಮಾಡಿತ್ತು.
ಹೀಗಾಗಿ ಈಗ ‘ಜೈಲರ್ 2’ ಮೇಲೆ ಭಾರೀ ನಿರೀಕ್ಷೆ ಇದೆ. ಮೊದಲ ಭಾಗದಂತೆ ಎರಡನೇ ಭಾಗವೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಾ? ಹಿಂದಿನ ದಾಖಲೆಗಳನ್ನು ಮುರಿಯುತ್ತಾ? ಅನ್ನೋದನ್ನು ಕಾದು ನೋಡಬೇಕು. ಸಿನಿಮಾ ಅಕ್ಟೋಬರ್ 15, 2026ರಂದು ತೆರೆಗೆ ಬರಲು ಸಿದ್ಧವಾಗಿದ್ದು, ರಜನಿಕಾಂತ್ ಅಭಿಮಾನಿಗಳಂತೂ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. (ಏಜೆನ್ಸೀಸ್)