

ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ಮತ್ತು 2 ಚಿತ್ರಗಳ ಮೂಲಕ ರಾತ್ರೋರಾತ್ರಿ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿರುವ ರಾಕಿಂಗ್ ಸ್ಟಾರ್ ಯಶ್ ( Yash ), ದೇಶದ ಮೂಲೆ ಮೂಲೆಗಳಲ್ಲಿ ದೊಡ್ಡ ಅಭಿಮಾನಿ ಬಳಗವನ್ನೇ ಸಂಪಾದಿಸಿದ್ದಾರೆ. ಆದರೆ, ಆ ಎರಡು ಸಿನಿಮಾಗಳಿಂದ ಸಿಕ್ಕ ಅಪ್ರತಿಮ ಯಶಸ್ಸು ಮತ್ತು ಖ್ಯಾತಿಗೆ, ಇತ್ತೀಚೆಗೆ ತೆರೆಕಂಡ ಅವರ 'ಟಾಕ್ಸಿಕ್' ಸಿನಿಮಾ ತಂದೊಡ್ಡಿದ ಸವಾಲುಗಳು ದೊಡ್ಡ ಸುದ್ದಿಯಾಗಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಚಿತ್ರವು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿರುವುದು ಯಶ್ ಅವರ ವೈಯಕ್ತಿಕ ಇಮೇಜ್‌ಗೆ ಧಕ್ಕೆ ತಂದಿರುವುದು ಸುಳ್ಳಲ್ಲ. ಯಶ್ ಗಳಿಸಿರುವ ಸ್ಟಾರ್‌ಡಮ್ ಕೇವಲ 'ಕೆಜಿಎಫ್' ಚಿತ್ರದ ಮ್ಯಾಜಿಕ್ ಹೊರತು ಅವರ ವೈಯಕ್ತಿಕ ಇಮೇಜ್ ಅಲ್ಲ ಎಂಬ ವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಚಾಲ್ತಿಯಲ್ಲಿವೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ, ಯಶ್ ಅವರ ಮುಂದಿನ ಸಿನಿಮಾ ಯಾರ ಜೊತೆ ಎಂಬುದರ ಕುರಿತು ಎಲ್ಲರ ಕಣ್ಣು ನೆಟ್ಟಿದೆ. ಈ ಸಂದರ್ಭದಲ್ಲಿ ಟಾಲಿವುಡ್‌ನ ಯುವ ನಿರ್ದೇಶಕರೊಬ್ಬರ ಜತೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ವಂದಂತಿ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿದೆ.
ಮಂಚು ಮನೋಜ್ ನಟನೆಯ 'ಡೇವಿಡ್ ರೆಡ್ಡಿ' ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿರುವ ಹನುಮ ರೆಡ್ಡಿ ಯಕ್ಕಂಟಿ ಅವರ ಜತೆ ಯಶ್ ಮುಂದಿನ ಪ್ರಾಜೆಕ್ಟ್ ಮಾಡಲಿದ್ದಾರೆ ಎಂಬ ಪ್ರಚಾರ ವ್ಯಾಪಕವಾಗಿ ಹಬ್ಬಿದೆ. ವಿಶೇಷವೆಂದರೆ, ಹನುಮ ರೆಡ್ಡಿ ನಿರ್ದೇಶನದ ಮೊದಲ ಚಿತ್ರವೇ ಇದುವರೆಗೆ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಹೊಸ ಕಾಂಬಿನೇಷನ್ ಕುರಿತ ಸುದ್ದಿ ಸಿನಿರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ವಂದಂತಿಗಳಿಗೆ ಈಗ ಯಶ್ ಅವರ ಆಪ್ತ ಮೂಲಗಳು ಸ್ಪಷ್ಟನೆ ನೀಡಿ ತೆರೆ ಎಳೆದಿವೆ. ಯಶ್ ಅವರು ಹನುಮ ರೆಡ್ಡಿ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟಪಡಿಸಿವೆ. ಹೊಸ ನಿರ್ದೇಶಕರ ಜೊತೆ ನಟಿಸುವ ಬಗ್ಗೆ ಯಾವುದೇ ಅಧಿಕೃತ ನಿರ್ಧಾರವಾಗಿಲ್ಲ ಹಾಗೂ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿಳಿಸುವುದರ ಮೂಲಕ ಎಲ್ಲಾ ರೀತಿಯ ಊಹಾಪೋಹಗಳಿಗೆ ವಿರಾಮ ಹಾಕಿವೆ.
ಮತ್ತೊಂದೆಡೆ, ಯಶ್ ಅವರ ಇತ್ತೀಚಿನ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಒಟಿಟಿ ಬಿಡುಗಡೆ ಕುರಿತು ಅನಿಶ್ಚಿತತೆ ಮುಂದುವರೆದಿದೆ. ಸಿನಿಮಾ ಬಿಡುಗಡೆಗೂ ಮುನ್ನ ಭಾರಿ ಮೊತ್ತವನ್ನು ನೀಡಲು ಮುಂದೆ ಬಂದಿದ್ದ ಒಟಿಟಿ ದೈತ್ಯ ಸಂಸ್ಥೆಗಳು, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ಕಂಡ ಕಾರಣದಿಂದ ಈಗ ಹಿಂದೆಟು ಹಾಕುತ್ತಿವೆ. ಮೂಲಗಳ ಪ್ರಕಾರ, ಒಟಿಟಿ ಸಂಸ್ಥೆಗಳು ಈಗ ಕೇವಲ 30 ಕೋಟಿ ರೂ.ಗಳ ಆಫರ್ ನೀಡಲು ಮಾತ್ರ ಆಲೋಚಿಸುತ್ತಿವೆ ಎನ್ನಲಾಗಿದೆ. ಕೆವಿಎನ್ ಪ್ರೊಡಕ್ಷನ್ ಜತೆಗೆ ಯಶ್ ಸ್ವತಃ ನಿರ್ಮಾಣದಲ್ಲಿ ಪಾಲುದಾರರಾಗಿರುವ ಈ ಸಿನಿಮಾಗೆ ಒಟಿಟಿ ಹಕ್ಕುಗಳ ಮೂಲಕ ಬರುವ ಹಣದಲ್ಲೂ ಹಿನ್ನಡೆಯಾಗಿರುವುದು ಚಿತ್ರತಂಡಕ್ಕೆ ಮುಜುಗರದ ಪರಿಸ್ಥಿತಿಯನ್ನು ತಂದಿಟ್ಟಿದೆ.
ಸಿನಿಮಾಗಳ ಆಯ್ಕೆಯಲ್ಲಿ ಅತ್ಯಂತ ಎಚ್ಚರಿಕೆ ವಹಿಸುವ ಯಶ್, ತಮ್ಮ ಮುಂದಿನ ಪ್ರಾಜೆಕ್ಟ್ ಅನ್ನು ಅತ್ಯಂತ ಪ್ರಬುದ್ಧವಾಗಿ ಮತ್ತು ಬಲವಾದ ಕಥೆಯೊಂದಿಗೆ ಘೋಷಿಸಲು ಸಿದ್ಧತೆ ನಡೆಸುತ್ತಿದ್ದಾರೆ. 'ಟಾಕ್ಸಿಕ್' ಚಿತ್ರದ ಸೋಲು ಮತ್ತು ಒಟಿಟಿ ಗೊಂದಲಗಳ ಸವಾಲುಗಳನ್ನು ಮೆಟ್ಟಿ ನಿಂತು, ರಾಕಿ ಭಾಯ್ ಯಾವ ರೀತಿಯಲ್ಲಿ ಕಂಬ್ಯಾಕ್ ಮಾಡಲಿದ್ದಾರೆ ಎಂಬ ಕುತೂಹಲ ಸಿನಿರಂಗದಲ್ಲಿ ದಟ್ಟವಾಗಿದೆ. ಅಭಿಮಾನಿಗಳು ಯಾವುದೇ ವಂದಂತಿಗಳಿಗೆ ತಲೆಕೆಡಿಸಿಕೊಳ್ಳದೆ ತಮ್ಮ ನೆಚ್ಚಿನ ನಟನ ಅಧಿಕೃತ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದು, ಯಶ್ ಅವರ ಮುಂದಿನ ನಡೆ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆಯಲಿದೆ, (ಏಜೆನ್ಸೀಸ್).