Mamitha Baiju: ಮಲಯಾಳಂ ಚಿತ್ರರಂಗದಲ್ಲಿ ಸಣ್ಣ-ಪುಟ್ಟ, ಪಾತ್ರಗಳಿಂದ, ಜೂನಿಯರ್ ಆರ್ಟಿಸ್ಟ್ ಆಗಿ ಸಿನಿ ಕರಿಯರ್ ಆರಂಭಿಸಿದ ಮಮಿತಾ ಬೈಜು ಈಗ ಭಾರತೀಯ ಚಿತ್ರೋದ್ಯಮದಲ್ಲಿ ಅತ್ಯಂತ ಯಶಸ್ವಿ ನಟಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಲ್ಲದೇ, ಹೊಸ ಮೈಲಿಗಲ್ಲು ಕೂಡ ಸಾಧಿಸಿರುವುದು ಸದ್ಯ ಅವರ ಬೇಡಿಕೆಯನ್ನು ದುಪ್ಪಟ್ಟಾಗಿಸಿದೆ.
ಈ ವರ್ಷ ಜನ ನಾಯಗನ್, ವಿಶ್ವನಾಥ್ ಅಂಡ್ ಸನ್ಸ್ ಮತ್ತು ಬೆತ್ಲಹೆಮ್ ಕುಟುಂಬ ಯೂನಿಟ್ ಎಂಬ ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಬಾಲಿವುಡ್ ನಟಿಮಣಿಯರಾದ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಮಲಯಾಳಂನ ಯುವ ಜನಪ್ರಿಯ ನಟಿ, ಸದ್ಯ ಸಾಲು ಸಾಲು ಹಿಟ್ ಸಿನಿಮಾಗಳನ್ನೇ ಕೊಡುತ್ತಿದ್ದಾರೆ ಎನ್ನುವುದಕ್ಕಿಂತ ಪ್ರತಿ ಚಿತ್ರಗಳಲ್ಲಿನ ಅವರ ಮುದ್ದಾದ ಹಾಗೂ ನೋಡುಗರು ಒಪ್ಪಿಕೊಳ್ಳುವಂತ ಅಭಿನಯ ಸಿನಿಪ್ರಿಯರ ಫೇವರೆಟ್ ಆಗಿಬಿಟ್ಟಿದೆ.
ಈ ವರ್ಷ, ಒಟ್ಟು ನಾಲ್ಕು ಸಿನಿಮಾಗಳನ್ನು ನೀಡಿರುವ ಯುವ ನಟಿಗೆ ಮೂರು ಚಿತ್ರಗಳು ಕೈಹಿಡಿದಿದ್ದು, ಒಂದು ಮಾತ್ರ ಫ್ಲಾಪ್ ಸಾಲಿಗೆ ಸೇರಿದೆ. ಕೇವಲ ಇದೊಂದು ವರ್ಷದಲ್ಲಿ 800 ಕೋಟಿ ರೂ. ಗಳಿಕೆ ಕಂಡಿರುವ ಮಮಿತಾ ನಟನೆಯ ಚಿತ್ರಗಳು, ನಟಿಯ ಹೆಸರಿಗೆ ಹೊಸ ದಾಖಲೆಯನ್ನೂ ಸೇರಿಸಿದೆ. ತಮ್ಮ ಇತ್ತೀಚಿನ 'ಬೆತ್ಲೆಹೆಮ್ ಕುಟುಂಬ ಯೂನಿಟ್' ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿರುವ ಈ ಮಲಯಾಳಿ ಬ್ಯೂಟಿ, ನಟಿಸಿದ ಮೂರು ಬಹುನಿರೀಕ್ಷಿತ ಸಿನಿಮಾಗಳು 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಕಂಡಿದೆ. ಈ ರೀತಿ ಒಂದೇ ವರ್ಷದಲ್ಲಿ ಮೂರು ಸೂಪರ್ಹಿಟ್ ಚಿತ್ರಗಳನ್ನು ಕೊಟ್ಟ ಹಾಗೂ ಕಲೆಕ್ಷನ್ ಕಂಡ ಭಾರತೀಯ ನಟಿಯರ ಪೈಕಿ ಮಮಿತಾ ಮೂರನೇ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
'ಪ್ರೇಮಲು' ಮೂಲಕ ಸೂಪರ್ಹಿಟ್ ನೋಡಿದ ಈ ಚೆಲುವೆ, ಇಲ್ಲಿಯವರೆಗೆ ಅಭಿನಯಿಸಿರುವ ಅಷ್ಟು ಸಿನಿಮಾಗಳಲ್ಲಿಯೂ ಗ್ಲಾಮರಸ್ಗಿಂತಲೂ ತಮ್ಮ ಸಿಂಪಲ್ ನಟನೆಯಿಂದಲೇ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ಡ್ಯೂಡ್ ಚಿತ್ರದಿಂದ ಸಿನಿಪ್ರಿಯರಿಗೆ ಇನ್ನಷ್ಟು ಹತ್ತಿರವಾದ ಮಮಿತಾ, ಕೇವಲ ಮಲಯಾಳಂ, ಕಾಲಿವುಡ್, ಮಾಲಿವುಡ್ ಮಾತ್ರವಲ್ಲದೇ, ಕನ್ನಡ, ಹಿಂದಿ ಸೇರಿದಂತೆ ಇತರೆ ಭಾಷೆಯ ಸಿನಿಪ್ರೇಮಿಗಳು ಸಖತ್ ಅಚ್ಚುಮೆಚ್ಚಿನ ನಟಿಯಾಗಿದ್ದಾರೆ. ವ್ಯಾಪಕ ಮೆಚ್ಚುಗೆ ಗಳಿಸಿ ಎಲ್ಲರ ಹೃದಯ ಗೆದ್ದಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಬ್ಯೂಟಿ ಬದಲಿಗೆ ಪಾತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಮಮಿತಾ, ಪ್ರತಿ ಚಿತ್ರದಲ್ಲಿಯೂ ತುಂಬಾ ಸರಳವಾದ ನಟನೆಯ ಮೂಲಕವೇ ಈಗ ಭಾರತದ ಟಾಪ್ ಟ್ರೆಂಡಿಂಗ್ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ.
'ವಿಶ್ವನಾಥ್ ಅಂಡ್ ಸನ್ಸ್' ಚಿತ್ರದ ಬಿಡುಗಡೆಗೂ ಮುನ್ನ ವೇದಿಕೆಯಲ್ಲಿ ಮಮಿತಾ ಬಗ್ಗೆ ಮಾತನಾಡಿದ್ದ ತಮಿಳು ನಟ ಸೂರ್ಯ, ಯಾವುದೇ ಬ್ಯಾಕ್ಗ್ರೌಂಡ್ ಇಲ್ಲದೇ, ತನ್ನ ಮೇಲೆ ನಂಬಿಕೆ ಇಟ್ಟುಕೊಂಡು ಇಲ್ಲಿಯವರೆಗೆ ಬಂದ ಯುವತಿ ಈಕೆ. ಬಾಲನಟಿಯಾಗಿ, ಜೂನಿಯರ್ ಆರ್ಟಿಸ್ಟ್ ಆಗಿ ಇಂದು ವಿಶ್ವನಾಥ್ ಅಂಡ್ ಸನ್ಸ್ ಚಿತ್ರದಲ್ಲಿ ಸೆಂಟರ್ ಸ್ಟೇಜ್ ಗಿಟ್ಟಿಸಿಕೊಂಡಿದ್ದಾರೆ ಎಂದು ಗುಣಗಾನ ಮಾಡಿದರು.
ಒಂದೇ ವರ್ಷದಲ್ಲಿ ಬ್ಯಾಕ್ ಟು ಬ್ಯಾಕ್ ಸೂಪರ್ಹಿಟ್ ನೋಡಿದ ಯುವ ನಟಿಯ ಕೈಯಲ್ಲಿ ಇದೀಗ ಸಾಲು ಸಾಲು ಸಿನಿಮಾಗಳಿವೆ. ದೊಡ್ಡ ಬ್ಯಾನರ್ನಿಂದ ಹಿಡಿದು ಹೊಸಬರ ತಂಡಗಳು ಮಮಿತಾರನ್ನು ತಮ್ಮ ಮುಂದಿನ ಚಿತ್ರಗಳಿಗೆ ಆಯ್ಕೆ ಮಾಡಿಕೊಳ್ಳಲು ಮುಂದಾಗಿವೆ ಎಂದು ಸಿನಿ ಮೂಲಗಳು ತಿಳಿಸಿವೆ. ಈ ಪೈಕಿ, ಪ್ರಸ್ತುತ 'ಇರಂದು ವಾನಮ್' (ತಮಿಳು), 'ಪ್ರೇಮಲು' (ಮಲಯಾಳಂ), 'ಹಲೋ ಡಿಯರ್' (ಮಲಯಾಳಂ) ಮತ್ತು ಇನ್ನೂ ಹೆಸರಿಡದ 'ಪಿಆರ್ಎಸ್01' (ತಮಿಳು) ಸಿನಿಮಾಗಳಲ್ಲಿ ಬೈಜು ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ,(ಏಜೆನ್ಸೀಸ್).