ನ್ಯೂಸ್

ಶೀಘ್ರದಲ್ಲಿಯೇ ಮಾರಾಟವಾಗಲಿವೆ ಮೂರು ಸರ್ಕಾರಿ ಬ್ಯಾಂಕ್​ಗಳು...!

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು ಸರ್ಕಾರಿ ಸ್ವಾಮ್ಯದ ಮೂರು ಬ್ಯಾಂಕ್​ಗಳ ಖಾಸಗೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಅವುಗಳನ್ನು ಆರ್ಥಿಕವಾಗಿ ಇನ್ನಷ್ಟು ಸದೃಢಗೊಳಿಸುವ ಹಾಗೂ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೊಳಗಾಗದಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿ ಪುನಶ್ಚೇತನ ಕಾರ್ಯ ಕೈಗೊಳ್ಳುವ ಹೊರೆಯನ್ನು ತಪ್ಪಿಸಲು ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಸರ್ಕಾರದ ನೀತಿ ನಿರೂಪಣಾ ಸಂಸ್ಥೆಯಾದ ನೀತಿ ಆಯೋಗದಿಂದಲೇ ನೀಡಲಾದ ಸಲಹೆ ಮೇರೆಗೆ ಬ್ಯಾಂಕುಗಳ ಖಾಸಗೀಕರಣಕ್ಕೆ ಮುಂದಾಗಲಾಗುತ್ತಿದೆ.

ಪಂಜಾಬ್​ ಮತ್ತು ಸಿಂಧ್​ ಬ್ಯಾಂಕ್​, ಬ್ಯಾಂಕ್​ ಆಫ್​ ಮಹಾರಾಷ್ಟ್ರ ಹಾಗೂ ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ ಖಾಸಗೀಕರಣದ ಬಗ್ಗೆ ಚರ್ಚೆಗಳು ಜಾರಿಯಲ್ಲಿವೆ. ಈ ಕಾರಣಕ್ಕಾಗಿಯೇ ಈ ಮೂರು ಬ್ಯಾಂಕುಗಳನ್ನು ವಿಲೀನ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು ಎಂದು ಹೇಳಲಾಗಿದೆ.

ಬ್ಯಾಂಕಿಂಗ್​ ಕ್ಷೇತ್ರದಲ್ಲಿ ದೀರ್ಘ ಕಾಲಾವಧಿಗೆ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಬೇಕು ಎಂಬುದು ನೀತಿ ಆಯೋಗದ ಸಲಹೆಯಾಗಿದೆ. ಬೃಹತ್​ ಉದ್ಯಮ ಸಂಸ್ಥೆಗಳಿಗೆ ಕೆಲ ಷರತ್ತುಗಳಿಗೆ ಬ್ಯಾಂಕಿಂಗ್​ ವಹಿವಾಟು ನಡೆಸಲು ಪರವಾನಗಿ ನೀಡಬೇಕೆಂದು ಕೂಡ ನೀತಿ ಆಯೋಗ ಶಿಫಾರಸು ಮಾಡಿದೆ.

ರಾಷ್ಟ್ರೀಕರಣಗೊಂಡ ಕೆಲ ಬ್ಯಾಂಕುಗಳ ಖಾಸಗೀಕರಣದ ಚರ್ಚೆ ನಡೆದಿದೆ. ಆದರೆ, ಈ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ. ಈ ಬಗ್ಗೆ ಮುಂದಿನ ಹಂತದಲ್ಲಿ ಬೆಳವಣಿಗೆಗಳು ಉಂಟಾಗಬೇಕಾದರೆ, ಬ್ಯಾಂಕ್​ಗಳ ರಾಷ್ಟ್ರೀಕರಣ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆರ್ಥಿಕ ವ್ಯವಸ್ಥೆಯಲ್ಲಿ ಖಾಸಗಿ ಹೂಡಿಕೆಗೆ ಮುಕ್ತ ಅವಕಾಶಗಳನ್ನು ಕಲ್ಪಿಸುವ ಬಗ್ಗೆ ಕಳೆದ ತಿಂಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್​ನ ಕಳೆದ ತಿಂಗಳಷ್ಟೇ ಘೋಷಿಸಿದ್ದರು.