ನ್ಯೂಸ್

ಮಾತಾಡುವ ಶಿಲೆಗಳು; ಪರಂಪರೆಯ ಅಧಿಕೃತ ವಕ್ತಾರರು ಈ ಶಿಲಾಶಾಸನಗಳು

ಶಾಸನಗಳು ಇತಿಹಾಸದ ಕನ್ನಡಿ. ಆಯಾ ಕಾಲದ ರಾಜ್ಯಾಡಳಿತ, ಜನಜೀವನ, ರಾಜರು ಹಾಗೂ ಅವರ ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಇತಿಹಾಸದ ಗವಾಕ್ಷಿಗಳು ಈ ಶಾಸನಗಳು. ಕರ್ನಾಟಕದಲ್ಲಿ 20 ಸಾವಿರಕ್ಕಿಂತಲೂ ಹೆಚ್ಚು ಶಾಸನಗಳು ದೊರೆತಿದ್ದು, ಹಲವು ರಾಜಮನೆತನಗಳ ವಿವರಗಳನ್ನು ಒಳಗೊಂಡಿವೆ. ಶಾಸನಗಳಲ್ಲಿ ತಾಮ್ರಶಾಸನ ಮತ್ತು ಶಿಲಾಶಾಸನಗಳೆಂದು ಎರಡು ವಿಧಗಳಿವೆ. ತಾಮ್ರ ಶಾಸನಗಳು ವಿದ್ವಾಂಸರಿಗೆ ಮಾಡುವ ಸನ್ಮಾನ, ಗೌರವದ ವಿವರಗಳನ್ನು ಒಳಗೊಂಡಿರುತ್ತವೆ. ಶಿಲಾಶಾಸನಗಳು ರಾಜ್ಯವೊಂದರ ಒಂದು ನಿರ್ದಿಷ್ಟ ಕಾಲದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳನ್ನು ತಿಳಿಸುತ್ತ, ಕರ್ನಾಟಕದ ಹಿರಿಮೆ-ಗರಿಮೆಗೆ ಸಾಕ್ಷಿಯಾಗಿವೆ.

ಹಲ್ಮಿಡಿ ಶಾಸನ: ಐದನೇ ಶತಮಾನದ ಹಲ್ಮಿಡಿ ಶಾಸನವು ಕರ್ನಾಟಕದ ಅತ್ಯಂತ ಪ್ರಾಚೀನ ಕನ್ನಡ ಶಾಸನವೆಂದು ಹೇಳಲಾಗುತ್ತದೆ. ತಾಳಗುಂದದಲ್ಲಿ ದೊರೆತಿರುವ ಸಿಂಹಕಟಾಂಜನ ಶಾಸನವು ಇದಕ್ಕಿಂತಲೂ ಹಳೆಯದು ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹಲ್ಮಿಡಿ ಶಾಸನದಲ್ಲಿನ ಆರಂಭದ ಸಂಸ್ಕೃತ ಶ್ಲೋಕವೊಂದನ್ನು ಬಿಟ್ಟರೆ ಉಳಿದೆಲ್ಲ ವಿವರಗಳು ಕನ್ನಡದಲ್ಲಿಯೇ ಇವೆ. ಸಿಂಹಕಟಾಂಜನವು ಪರಿಪೂರ್ಣವಾಗಿ ಕನ್ನಡದಲ್ಲಿಯೇ ಇರುವ ಶಾಸನವಾಗಿದೆ.

ಇತರ ಶಾಸನಗಳು: ಐಹೊಳೆ ಮತ್ತು ಮಹಾಕೂಟದ ಶಾಸನಗಳಿಂದ ಕಾಳಿದಾಸನ ಕಾಲವನ್ನು ನಿಖರವಾಗಿ ತಿಳಿಯಲು ಸಾಧ್ಯವಾಗಿದೆ. ದಾನಚಿಂತಾಮಣಿ ಅತ್ತಿಮಬ್ಬೆಯ ಪ್ರಶಸ್ತಿಯಾದ ಲಕ್ಕುಂಡಿ ಶಾಸನವನ್ನು ರನ್ನ ಕವಿಯೇ ಬರೆದಿರಬೇಕೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕದ ಶಾನಸಗಳಲ್ಲಿ ವಿಕ್ರಮ ಶಕೆ ಮತ್ತು ಶಾಲಿವಾಹನ ಶಕೆಗಳು ಪ್ರಮುಖವಾಗಿವೆ. ಚಾಲುಕ್ಯ ದೊರೆ ಆರನೆಯ ವಿಕ್ರಮಾದಿತ್ಯನ ವೈಭವ ಪಾರಮ್ಯಗಳನ್ನು ವಿಕ್ರಮ ಶಕೆಯು ಸೂಚಿಸಿದರೆ, ಶಾಲಿವಾಹನ ಶಕೆ ಎಂಬ ಪದವು ಮೊಟ್ಟಮೊದಲು ಕಾಣಿಸಿರುವುದು ದೇವಗಿರಿಯ ಯಾದವರ ಶಾಸನಗಳಲ್ಲಿ.

ಶಾತವಾಹನರ ಸಮಯದಲ್ಲಿ...: ಶಾತವಾಹನರು ಬೌದ್ಧಧರ್ವಿುಯರಾಗಿದ್ದ ಹಾಗೂ ಬಳ್ಳಾರಿಯ ಬಹುಭಾಗವು ಅವರ ಆಳ್ವಿಕೆಗೆ ಒಳಪಟ್ಟಿದ್ದ ವಿಚಾರವು ಅವರ ಎರಡನೇ ಶತಮಾನದ ಶಿಲಾಶಾಸನವೊಂದರಿಂದ ದೃಢಪಟ್ಟಿದೆ. ಶಾತವಾಹನರ ನಂತರ ಈ ಭಾಗವು ಪಲ್ಲವರ ವಶವಾಯಿತು ಎಂಬುದು ಪಲ್ಲವರ ದೊರೆ ಶಿವಸ್ಕಂದವರ್ಮನ ಪ್ರಾಕೃತ ಭಾಷೆಯಲ್ಲಿರುವ ತಾಮ್ರಶಾಸನದಿಂದ ತಿಳಿದುಬರುತ್ತದೆ. ಅದೇ ರೀತಿ ನಾಗಾರ್ಜುನಕೊಂಡದಲ್ಲಿ ದೊರೆತ ಇಕ್ಷ್ವಾಕು ಅರಸರ 30 ಶಾಸನಗಳಿಂದ ಕಲಬುರಗಿ- ಯಾದಗಿರಿ ಬಳಿಯ ಸನ್ನತಿ ಕ್ಷೇತ್ರವು 3ನೇ ಶತಮಾನದ ಕಾಲದಲ್ಲಿ ಬೌದ್ಧರ ಪ್ರಭಾವಕ್ಕೆ ಒಳಪಟ್ಟಿತ್ತು ಎಂದು ತಿಳಿದುಬರುತ್ತದೆ.

ಕದಂಬರ ಕಾಲದಲ್ಲಿ...: ಪಲ್ಲವರನ್ನು ಸೋಲಿಸಿ ಕರ್ನಾಟಕದಲ್ಲಿ ಕದಂಬರ ಮಯೂರವರ್ಮನು ಒಂದು ಸ್ವತಂತ್ರ ರಾಜ್ಯವನ್ನು ನಿರ್ವಿುಸಿದುದು ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿ ಎಂಬಲ್ಲಿ ಬಂಡೆಯೊಂದರ ಮೇಲೆ ಕೆತ್ತಲಾಗಿರುವ ಶಿಲಾಶಾಸನದ ಮೂಲಕ ತಿಳಿದುಬರುತ್ತದೆ. ಈ ಶಾಸನವು ಬ್ರಾಹ್ಮೀ ಮತ್ತು ಪ್ರಾಕೃತ ಈ ಎರಡೂ ಲಿಪಿಗಳಲ್ಲಿದೆ.

ಮೌರ್ಯರ ಆಡಳಿತದಲ್ಲಿ...: ಇಡೀ ದೇಶದಲ್ಲಿ ದೊರೆತಿರುವ ಅಶೋಕನ 13 ಶಿಲಾಶಾನಗಳಲ್ಲಿ 6 ಶಿಲಾಶಾಸನಗಳು ಕರ್ನಾಟಕದಲ್ಲಿಯೇ ದೊರೆತಿರುವುದು ವಿಶೇಷ. ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಗ ರಾಮೇಶ್ವರಗಳಲ್ಲಿ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ, ಗವಿಮಠ ಮತ್ತು ಪಾಲ್ಕಿಗುಂಡು ಪ್ರದೇಶಗಳಲ್ಲಿ ಬ್ರಾಹ್ಮೀ ಲಿಪಿಯಲ್ಲಿರುವ ಈ ಶಿಲಾಶಾಸನಗಳು ಸಂಶೋಧಿಸಲ್ಪಟ್ಟಿವೆ. ಮಸ್ಕಿ ಶಾಸನದಲ್ಲಿ ಅಶೋಕನ ದೇವಾನಾಂಪ್ರಿಯ ಬಿರುದು ಉಲ್ಲೇಖಗೊಂಡಿರುವುದು ಗಮನಾರ್ಹ. ಮಸ್ಕಿ ಪಟ್ಟಣದ ಗುಡ್ಡದಲ್ಲಿ ಗಣಿ ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಬ್ರಿಟಿಷ್ ಅಧಿಕಾರಿ ಚಾರ್ಲ್ಸ್ ಬಿಡನ್ ಅವರ ಕಣ್ಣಿಗೆ ಈ ಶಾಸನವು 1915ರ ಜನವರಿ 27ರಂದು ಕಂಡಿತು. ಈ ಶಾಸನವನ್ನು ಹಾಕಿಸಿದ್ದು ಅಶೋಕ ಮತ್ತು ಬರೆದದ್ದು ಚಪಡ ಎಂಬ ಲಿಪಿಕಾರ. ಇದನ್ನು ಬ್ರಾಹ್ಮಿಲಿಪಿಯಲ್ಲಿ ಕೆತ್ತಲಾಗಿದೆ. ದೇವಾನಾಂಪ್ರಿಯ (ದೇವತೆಗಳಿಗೆ ಪ್ರಿಯನಾದ ಅಶೋಕ) ಎಂದರೆ ಅಶೋಕನೇ ಎಂದು ಖಚಿತ ಪಡಿಸಿದ ಹೆಗ್ಗಳಿಕೆ ಈ ಶಾಸನದ್ದು. ಕ್ರಿ.ಪೂ. 300ರಲ್ಲಿ ರಾಯಚೂರು ಜಿಲ್ಲೆಯು ಅಶೋಕನ ಆಳ್ವಿಕೆಗೆ ಒಳಪಟ್ಟಿತ್ತು. ಕಳಿಂಗ ಮಹಾಯುದ್ಧದ ನಂತರ ಶಾಂತಿಪ್ರಿಯ ಅಶೋಕನು ತನ್ನ ಆಳ್ವಿಕೆಯ ಪ್ರದೇಶಗಳಲ್ಲಿ ಶಾಸನಗಳನ್ನು ಬರೆಸಿದ. ಇದರ ಫಲವೇ ಮಸ್ಕಿ ಶಾಸನ. ಈ ಶಾಸನವು ಅಶೋಕ ಶಾಸನಗಳ ಅಧ್ಯಯನಕಾರರಿಗೆ ಮತ್ತು ಇತಿಹಾಸಕಾರರಿಗೆ ಮಹತ್ವದ್ದಾಗಿದೆ. ಅಶೋಕನ ಶಿಲಾ ಶಾಸನದ ಸ್ಥಳವನ್ನು ರಾಜ್ಯ ಸರ್ಕಾರ 10 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುತ್ತಿದೆ.

ವೈಶಿಷ್ಟ್ಯಗಳು

  • 4ನೇ ಶತಮಾನದಿಂದ 17ನೇ ಶತಮಾನದವರೆಗಿನ ಕದಂಬ, ಬಾದಾಮಿ, ಚಾಲುಕ್ಯ, ರಾಷ್ಟ್ರಕೂಟ, ಕಲ್ಯಾಣಿ, ಚಾಲುಕ್ಯ, ಹೊಯ್ಸಳ, ಕಳಚೂರ್ಯರಂಥ ವಿವಿಧ ರಾಜಮನೆತನಗಳ ವಿವರಗಳನ್ನೂ ವಿಶೇಷಗಳನ್ನೂ ಕರ್ನಾಟಕದ ಶಾಸನಗಳ ಅಧ್ಯಯನದಿಂದ ತಿಳಿಯಬಹುದಾಗಿದೆ.
  • ಭಾಷಾ ದೃಷ್ಟಿಯಿಂದ ಈ ಶಾಸನಗಳು ಪ್ರಾಕೃತ, ಸಂಸ್ಕೃತ, ಕನ್ನಡ ಮತ್ತು ಮಿಶ್ರ ಭಾಷೆಗಳಲ್ಲಿವೆ.
  • ಕದಂಬರ ನಂತರ ಕರ್ನಾಟಕದಲ್ಲಿ ರಾಜ್ಯವಾಳಿದ ಅರಸರ ಶಾಸನಗಳಲ್ಲಿ ಸಾಮಾನ್ಯವಾಗಿ ತಾಮ್ರಶಾಸನಗಳು ಸಂಸ್ಕೃತ ಭಾಷೆಯಲ್ಲಿಯೂ, ಶಿಲಾಶಾಸನಗಳು ಕನ್ನಡದಲ್ಲಿಯೂ ಇವೆ.
  • ಶಿಲಾಶಾಸನಗಳಂತೆಯೇ ಕರ್ನಾಟಕದಲ್ಲಿ ಮಾಸ್ತಿಕಲ್ಲು, ವೀರಗಲ್ಲು, ಗರುಡಗಲ್ಲು ಹಾಗೂ ನಿಸಿದಿಗಲ್ಲುಗಳು ಪ್ರಸಿದ್ಧವಾಗಿವೆ. ಜೈನರ ಸಲ್ಲೇಖನವ್ರತದ ವಿವರಗಳನ್ನು ನಿಸಿದಿಕಲ್ಲು ಒಳಗೊಂಡಿರುತ್ತದೆ.
  • ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿದುಕೊಳ್ಳಲು ಶಾಸನಗಳು ಸಹಾಯಕವಾಗಿದ್ದು, ಚರಿತ್ರೆಯ ಪ್ರಮುಖ ಭಾಗವಾಗಿವೆ.