ನ್ಯೂಸ್

ಹಾಲು, ಮೊಸರಿನ ಮೇಲೆ ಟ್ಯಾಕ್ಸ್​​ ಹಾಕಿದ್ಯಾರು?, ನೀವು ಬಡವರ ಪರವೇ?; ರವಿಕುಮಾರ್​​ ವಿರುದ್ಧ ಗುಡುಗಿದ ಸಿಎಂ

ಮೋಹನ್​ ಶೆಟ್ಟಿ

ಬೆಂಗಳೂರು: ವಿಧಾನಪರಿಷತ್​​ ಕಲಾಪದಲ್ಲಿ ಅನ್ನ ಭಾಗ್ಯ ಯೋಜನೆ ಕುರಿತು ಸಿಎಂ ಸಿದ್ದರಾಮಯ್ಯ ಮತ್ತು ಎನ್​​. ರವಿಕುಮಾರ್​ ನಡುವೆ ಮಾತಿನ ಜಟಾಪಟಿ ನಡೆದಿದೆ.

​ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ್ದನ್ನು ಉಲ್ಲೇಖಿಸಿದ ಸಿಎಂಗೆ ಪ್ರತಿಕ್ರಿಯೆ ನೀಡಿದ ರವಿಕುಮಾರ್, ಪ್ರಧಾನಿ ಮೋದಿ ಅವರು 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದಾರೆ. ಮನಮೋಹನ್ ಸಿಂಗ್ ಕಾಯ್ದೆ ಮಾಡಿದರು, ಮೋದಿ ಅಕ್ಕಿ ನೀಡಿದ್ದಾರೆ. ಹಾಗಾಗಿ ಬಿಜೆಪಿ ಸದಾ ಬಡವರ ಪರ ಎಂದು ಹೇಳಿದರು.

ರವಿಕುಮಾರ್ ಹೇಳಿಕೆಗೆ ಕೋಪಗೊಂಡ ಸಿದ್ದರಾಮಯ್ಯ, "ಕುಳಿತುಕೊಳ್ಳಪ್ಪ, ಹಾಲು, ಮಜ್ಜಿಗೆ, ಮೊಸರಿನ ಮೇಲೆ ಟ್ಯಾಕ್ಸ್ ಹಾಕಿದ್ದು ಯಾರು? ನೀವು ಬಡವರ ಪರವೇ?" ಎಂದು ಹೇಳುವ ಮೂಲಕ ರವಿಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು. ಈ ಮಧ್ಯೆ ಧ್ವನಿ ಎತ್ತಿದ ಆಹಾರ ಸಚಿವ ಕೆ.ಎಚ್​. ಮುನಿಯಪ್ಪ, "ನಾನು ಅನ್ನಭಾಗ್ಯ ಯೋಜನೆ ಅಕ್ಕಿಗಾಗಿ ಕೇಂದ್ರ ಆಹಾರ ಸಚಿವರನ್ನು ಭೇಟಿ ಮಾಡಲು ಸಮಯ ಕೇಳಿದ್ದೇ. ಆದ್ರೆ, ಅವರು ಸಮಯವೇ ಕೊಡಲಿಲ್ಲ. ನಾನು ಮಾಧ್ಯಮಗಳ ಮುಂದೆ ಹೇಳಿದ ನಂತರದಲ್ಲಿ ಸಮಯ ಕೊಟ್ಟಿದ್ದು" ಎಂದು ಹೇಳಿದರು.

"ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದೆ. ನಮಗೂ ಅಕ್ಕಿ ಕೊಡಲಿಲ್ಲ, ಓಪನ್ ಮಾರುಕಟ್ಟೆಯಲ್ಲಿ ಯಾರೂ ಖರೀದಿ ಮಾಡಲಿಲ್ಲ, ಯಾರೂ ಮಾರಾಟ ಮಾಡಲಿಲ್ಲ. ಕೇಂದ್ರ ನಮಗೆ ಅನ್ಯಾಯ ಮಾಡಿದೆ" ಎಂದು ಹೇಳಿದರು.