Pakistani soldiers : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಗಡಿ ಉದ್ವಿಗ್ನತೆ ತೀವ್ರಗೊಂಡಿದೆ. ಶನಿವಾರ (ಅ.11) ತಡರಾತ್ರಿ ಉಭಯ ದೇಶಗಳ ಗಡಿಯಲ್ಲಿ ಗುಂಡಿನ ಚಕಮಕಿ ನಡೆದಿದ್ದು, ತಾಲಿಬಾನ್ ನೇತೃತ್ವದ ಅಫ್ಘಾನ್ ಪಡೆಗಳು ಡುರಾಂಡ್ ರೇಖೆಯ ಉದ್ದಕ್ಕೂ ಹಲವಾರು ಪಾಕಿಸ್ತಾನಿ ಸೇನಾ ಹೊರಠಾಣೆಗಳನ್ನು ವಶಪಡಿಸಿಕೊಂಡಿವೆ ಎಂದು ಅಫ್ಘಾನ್ನ ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ಘರ್ಷಣೆಯಲ್ಲಿ ಸುಮಾರು 12 ಪಾಕಿಸ್ತಾನಿ ಯೋಧರು ಹತ್ಯೆಯಾಗಿರುವುದಾಗಿ ಮತ್ತು ಅನೇಕ ಮಂದಿ ಗಾಯಗೊಂಡಿರುವುದಾಗಿ ಟೊಲೋ ನ್ಯೂಸ್ ವರದಿ ಮಾಡಿದೆ. ಇನ್ನು ಬಹ್ರಮ್ಚಾ ಜಿಲ್ಲೆಯ ಶಾಕಿಜ್, ಬೀಬಿ ಜಾನಿ ಮತ್ತು ಸಲೇಹನ್ ಪ್ರದೇಶಗಳಲ್ಲಿ ಹಾಗೂ ಪಕ್ತಿಯ ಆರ್ಯೂಬ್ ಝಾಝಿ ಜಿಲ್ಲೆಯಾದ್ಯಂತ ಘರ್ಷಣೆ ತೀವ್ರವಾಗಿದೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದ್ದು, ನಮ್ಮ ಪಡೆಗಳು "ಪೂರ್ಣ ಬಲದಿಂದ" ಪ್ರತಿಕ್ರಿಯಿಸುತ್ತಿವೆ ಎಂದು ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ತನ್ನ ವಾಯುಪ್ರದೇಶವನ್ನು ಪಾಕಿಸ್ತಾನ ಉಲ್ಲಂಘನೆ ಮಾಡಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆ ನಡೆದಿದೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತುಲ್ಲಾ ಖೋವಾರಾಜ್ಮಿ ಹೇಳಿದ್ದಾರೆ. ಸದ್ಯ ಉಭಯ ದೇಶಗಳ ನಡುವೆ ಘರ್ಷಣೆಗಳು ಕೊನೆಗೊಂಡಿವೆ.
ಎದುರಾಳಿ ಕಡೆಯವರು ಮತ್ತೊಮ್ಮೆ ಅಫ್ಘಾನಿಸ್ತಾನದ ವಾಯುಪ್ರದೇಶವನ್ನು ಉಲ್ಲಂಘಿಸಿದರೆ, ನಮ್ಮ ಸಶಸ್ತ್ರ ಪಡೆಗಳು ವಾಯುಪ್ರದೇಶವನ್ನು ರಕ್ಷಿಸಲು ಸಿದ್ಧವಾಗಿವೆ ಮತ್ತು ಬಲವಾದ ಪ್ರತಿಕ್ರಿಯೆಯನ್ನು ನೀಡುತ್ತವೆ ಎಂದು ಖೋವಾರಾಜ್ಮಿ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಇದೇ ವೇಳೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಉದ್ವಿಗ್ನತೆ ಹೆಚ್ಚುತ್ತಿರುವ ಬಗ್ಗೆ ಕತಾರ್ ಕಳವಳ ವ್ಯಕ್ತಪಡಿಸಿದ್ದು, ಎರಡೂ ಕಡೆಯವರು ಸಂಯಮದಿಂದ ವರ್ತಿಸಬೇಕು ಮತ್ತು ಮಾತುಕತೆಯ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಕರೆ ನೀಡಿದೆ.
ಅಂದಹಾಗೆ, ಕಾಬೂಲ್ ಬಳಿ ಪಾಕಿಸ್ತಾನವು ವಾಯುದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಈ ಭೀಕರ ಗಡಿ ಸಂಘರ್ಷ ನಡೆದಿದೆ. ನಂಗರ್‌ಹಾರ್ ಮತ್ತು ಕುನಾರ್‌ನಲ್ಲಿರುವ ಪಾಕಿಸ್ತಾನಿ ಮಿಲಿಟರಿ ಸ್ಥಾನಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರದ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ ಎಂದು ಅಫ್ಘಾನಿಸ್ತಾನದ 201 ಖಾಲಿದ್ ಬಿನ್ ವಾಲಿದ್ ಆರ್ಮಿ ಕಾರ್ಪ್ಸ್ ಹೇಳಿದೆ. ಆದಾಗ್ಯೂ, ಇಸ್ಲಾಮಾಬಾದ್ ಈ ದಾಳಿಯನ್ನು ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ. (ಏಜೆನ್ಸೀಸ್)