ಕಾಬೂಲ್: ಅಫ್ಘಾನಿಸ್ತಾನ ( Taliban ) ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಉದ್ವಿಗ್ನ ವಾತವರಣ ಮುಂದುವರಿದಿದೆ. ಬುಧವಾರ (ಅ.15) ಪಾಕ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 15 ಅಫ್ಘಾನ್ ನಾಗರಿಕರು ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ತಾಲಿಬಾನ್ ( Taliban ) ಸೇನೆ ಕೂಡ ದಾಳಿ ನಡೆಸಿದ್ದು, ಪಾಕ್ ಸೇನೆ ಭಯ ಬಿದ್ದಿರುವಂತೆ ತೋರುತ್ತದೆ. ಇದರ ನಡುವೆ ಪಾಕ್ 48 ಗಂಟೆಗಳ ಕದನ ವಿರಾಮವನ್ನು ಘೋಷಣೆ ಮಾಡಿದೆ.
ಕಾಬೂಲ್ ಮತ್ತು ಕಂದಹಾರ್ ಮೇಲೆ ಪಾಕಿಸ್ತಾನದಿಂದ ನಡೆದ ದಾಳಿಗಳಿಂದ ಅಫ್ಘಾನಿಸ್ತಾನದ ಜನರು ಆಕ್ರೋಶಗೊಂಡಿದ್ದಾರೆ. ಸ್ಪಿನ್ ಬೋಲ್ಡಕ್‌ನಲ್ಲಿರುವ ಪಾಕಿಸ್ತಾನಿ ಮಿಲಿಟರಿ ಔಟ್‌ಪೋಸ್ಟ್‌ಗಳ ಮೇಲೆ ತಾಲಿಬಾನ್ ಪಡೆಗಳು ನಿಖರವಾದ ದಾಳಿ ನಡೆಸಿವೆ. ಇದರಿಂದಾಗಿ ಪಾಕ್ ಸೈನಿಕರು ಪಲಾಯನ ಮಾಡಿದ್ದು, ಕೆಲ ಸೈನಿಕರನ್ನು ಸೆರೆಹಿಡಿಯಲಾಗಿದೆ. ಈ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಆಹಾರ ಪದಾರ್ಥಗಳು, ಪಾಕಿಸ್ತಾನಿ ಸೈನಿಕರ ಸಮವಸ್ತ್ರಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲವನ್ನೂ ನಂಗರ್ಹಾರ್ ಪ್ರಾಂತ್ಯದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಲಾಯಿತು. ಈ ವೇಳೆ ಪಾಕಿಸ್ತಾನಿ ಸೈನಿಕರ ಪ್ಯಾಂಟ್‌ಗಳನ್ನು ಕೂಡ ಪ್ರದರ್ಶಿಸಲಾಯಿತು. ಈ ವೇಳೆ ತಾಲಿಬಾನ್ ಪರ ಘೋಷಣೆಗಳನ್ನು ಕೂಗಲಾಯಿತು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಪಾಕಿಸ್ತಾನಿ ದಾಳಿಯ ನಂತರ, ಅಫ್ಘಾನ್ ಜನರು ತಾಲಿಬಾನ್‌ಗೆ ಬೆಂಬಲವಾಗಿ ನಿಂತಿದ್ದಾರೆ. ಅಗತ್ಯವಿದ್ದರೆ, ನಾವು ಕೂಡ ಮುಜಾಹಿದ್ದೀನ್‌ಗಳಾಗುತ್ತೇವೆ ಮತ್ತು ಹೋರಾಡಲು ಸಿದ್ಧರಿದ್ದೇವೆ ಎಂದು ಕೆಲವು ಕಂದಹಾರ್ ಯುವಕರು ಹೇಳುತ್ತಿದ್ದಾರೆ. ಇಸ್ಲಾಮಿಕ್ ಎಮಿರೇಟ್ (ತಾಲಿಬಾನ್ ಮಧ್ಯಂತರ ಸರ್ಕಾರ) ಸೂಕ್ತ ಸೇಡು ತೀರಿಸಿಕೊಂಡಿದೆ. ಪಾಕಿಸ್ತಾನದ ವಿರುದ್ಧ ಇಡೀ ಜನರು ತಾಲಿಬಾನ್‌ನೊಂದಿಗೆ ಇರುವುದಾಗಿ ಜನರು ಹೇಳುತ್ತಿದ್ದಾರೆ. ನಮ್ಮ ಭೂಮಿಯನ್ನು ರಕ್ಷಿಸಿದ ಭದ್ರತಾ ಪಡೆಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ನಾವು ಯಾವಾಗಲೂ ಅವರ ಜತೆಯಾಗಿರುತ್ತೇವೆ ಎಂದು ಕಾಬೂಲ್ ನಿವಾಸಿಯೊಬ್ಬರು ಹೇಳಿದ್ದಾರೆ.
ಒಂದು ಕಾಲದಲ್ಲಿ ಮಿತ್ರ ರಾಷ್ಟ್ರಗಳಾಗಿದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ, ಡ್ಯುರಾಂಡ್ ರೇಖೆಗೆ ಸಂಬಂಧಿಸಿದಂತೆ ಘರ್ಷಣೆ ನಡೆಸುತ್ತಿವೆ. ಕಳೆದ ವಾರದಲ್ಲಿ ಎರಡೂ ದೇಶಗಳ ಸೇನೆಗಳು ಏಳು ಸ್ಥಳಗಳಲ್ಲಿ ಘರ್ಷಣೆ ನಡೆಸಿವೆ. ಮೊದಲನೆಯದಾಗಿ, ಕಾಬೂಲ್‌ನಲ್ಲಿರುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಶಿಬಿರಗಳ ಮೇಲೆ ಪಾಕಿಸ್ತಾನ ಸೇನೆಯು ವೈಮಾನಿಕ ದಾಳಿ ನಡೆಸಿತು. ತಾಲಿಬಾನ್ ಕೂಡ ಇದಕ್ಕೆ ಪ್ರತಿದಾಳಿ ನಡೆಸಿತು. ಆದಾಗ್ಯೂ, ಎರಡೂ ದೇಶಗಳು ದಾಳಿಗಳಿಗೆ ಪರಸ್ಪರ ಆರೋಪದಲ್ಲಿ ತೊಡಗಿವೆ. ಇನ್ನು ಮಂಗಳವಾರ ಮಧ್ಯರಾತ್ರಿಯಿಂದ ಪರಿಸ್ಥಿತಿ ಹದಗೆಟ್ಟಿದೆ. ಇದುವರೆಗಿನ ಈ ಉದ್ವಿಗ್ನತೆಯಲ್ಲಿ 200 ತಾಲಿಬಾನ್ ಮತ್ತು 58 ಪಾಕಿಸ್ತಾನಿ ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
2021 ರಲ್ಲಿ ತಾಲಿಬಾನ್, ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಇದು ಪಾಕಿಸ್ತಾನದೊಂದಿಗೆ ನಡೆದ ಅತಿದೊಡ್ಡ ಘರ್ಷಣೆಯಾಗಿದೆ. ಮತ್ತೊಂದೆಡೆ, ಅಫ್ಘಾನ್ ಸಚಿವರು ಭಾರತಕ್ಕೆ ಭೇಟಿ ನೀಡಿದ ಬಳಿಕ ಈ ದಾಳಿಗಳು ಪ್ರಾರಂಭವಾಗಿವೆ. ಕಾಬೂಲ್‌ನಲ್ಲಿ ರಾಯಭಾರ ಕಚೇರಿಯನ್ನು ತೆರೆಯುವುದಾಗಿ ಭಾರತ ಸರ್ಕಾರದ ಘೋಷಣೆ ಪಾಕಿಸ್ತಾನಕ್ಕೆ ಮುಜುಗರವನ್ನುಂಟುಮಾಡಿದೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಸಂಬಂಧಗಳು ಬಲಗೊಳ್ಳುವುದನ್ನು ಪಾಕಿಸ್ತಾನವು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಈ ದಾಳಿಗಳಿಂದ ಸ್ಪಷ್ಟವಾಗಿದೆ.
ಕದನ ವಿರಾಮಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿವೆ. ತಾಲಿಬಾನ್‌ಗಳ ಕೋರಿಕೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನ ಹೇಳಿದರೆ, ಪಾಕಿಸ್ತಾನ ಬಯಸಿದ್ದರಿಂದಲೇ ನಾವು ಕದನ ವಿರಾಮಕ್ಕೆ ಒಪ್ಪಿಕೊಂಡೆವು ಎಂದು ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳುತ್ತಿದ್ದಾರೆ. ಮತ್ತೊಂದೆಡೆ, ಪಾಕಿಸ್ತಾನ ಕತಾರ್ ಮತ್ತು ಸೌದಿ ಅರೇಬಿಯಾ ಸರ್ಕಾರಗಳಿಗೆ ಫೋನ್ ಕರೆಗಳನ್ನು ಮಾಡಿದ್ದು, ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಲು ಮತ್ತು ತಕ್ಷಣ ಮಧ್ಯಪ್ರವೇಶಿಸಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ತಾಲಿಬಾನ್‌ಗಳನ್ನು ಮನವೊಲಿಸಲು ಕೇಳಿಕೊಂಡಿದೆ ಎಂದು ವರದಿಯಾಗಿದೆ.
ಆದಾಗ್ಯೂ, ಅಫ್ಘಾನ್-ಪಾಕ್ ಸಂಘರ್ಷ ನಿನ್ನೆ, ಮೊನ್ನೆಯದಲ್ಲ. ಇದಕ್ಕೆ 132 ವರ್ಷಗಳ ಇತಿಹಾಸವಿದೆ. ಎರಡೂ ದೇಶಗಳ ನಡುವಿನ ಗಡಿ ರೇಖೆಯಾದ “ಡ್ಯುರಾಂಡ್ ಲೈನ್” ಈ ಸಮಸ್ಯೆಗೆ ಮೂಲ ಕಾರಣ ಎಂದು ವರದಿ ತಿಳಿಸಿದೆ. ಸುಮಾರು 2,640 ಕಿಮೀ (1,640 ಮೈಲಿ) ಉದ್ದವಿರುವ ಡ್ಯುರಾಂಡ್ ರೇಖೆಯನ್ನು 1893ರಲ್ಲಿ ಆಗಿನ ಬ್ರಿಟಿಷ್ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಸರ್ ಮಾರ್ಟಿಮರ್ ಡ್ಯುರಾಂಡ್ ಮತ್ತು ಅಫ್ಘಾನಿಸ್ತಾನದ ಆಡಳಿತಗಾರ ಅಮೀರ್ ಅಬ್ದುರ್ ರೆಹಮಾನ್ ಖಾನ್ ನಡುವಿನ ಒಪ್ಪಂದದ ಮೂಲಕ ಸ್ಥಾಪಿಸಲಾಯಿತು. ಈ ರೇಖೆಯು ಬ್ರಿಟಿಷ್ ಭಾರತ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿಯನ್ನು ವ್ಯಾಖ್ಯಾನಿಸಿತು. ಆದಾಗ್ಯೂ, ಈ ರೇಖೆಯು ಗಡಿಯಲ್ಲಿ ವಾಸಿಸುವ ಪಶ್ತೂನ್ ಮತ್ತು ಬಲೂಚ್ ಬುಡಕಟ್ಟುಗಳನ್ನು ವಿಭಜಿಸಿತು. 1893ರ ಡುರಾಂಡ್ ರೇಖೆಯನ್ನು ಅಫ್ಘಾನಿಸ್ತಾನ ಗುರುತಿಸುವುದಿಲ್ಲ. ತಾಲಿಬಾನ್ ಸೇರಿದಂತೆ ಹಿಂದಿನ ಅಫ್ಘಾನ್ ಆಡಳಿತಗಾರರು ತಮ್ಮ ಪಶ್ತೂನ್ ಬುಡಕಟ್ಟು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿದೆ, ಇದು ಅಫ್ಘಾನಿಸ್ತಾನಕ್ಕೆ ಸೇರಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಪಾಕಿಸ್ತಾನ ಮಾತ್ರ ಇದಕ್ಕೆ ಒಪ್ಪುವುದಿಲ್ಲ. ಅಂದಿನಿಂದಲೂ ಇದೊಂದು ವಿವಾದವಾಗಿ ಮಾರ್ಪಟ್ಟಿದ್ದು, ಸಂರ್ಘಷದ ಹಾದಿಯಲ್ಲೇ ಸಾಗಿದೆ.
ಡ್ಯುರಾಂಡ್ ರೇಖೆಯು ನಕ್ಷೆಯಲ್ಲಿನ ಒಂದು ರೇಖೆಯಲ್ಲ. ಇದು ದಕ್ಷಿಣ ಏಷ್ಯಾದ ಅತ್ಯಂತ ವಿವಾದಿತ ಪ್ರದೇಶಗಳಲ್ಲಿ ಒಂದು ಎಂದು ಹೇಳಲಾಗಿದೆ. ಪಾಕಿಸ್ತಾನವು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯವನ್ನು ತನ್ನದೇ ಎಂದು ಹೇಳಿಕೊಳ್ಳುತ್ತದೆ. ಮತ್ತೊಂದೆಡೆ, ಅಫ್ಘಾನಿಸ್ತಾನವು ಇದನ್ನು ಅನ್ಯಾಯವೆಂದು ಹೇಳುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಫ್ಘಾನ್-ಪಾಕಿಸ್ತಾನ ಪಡೆಗಳು ಗಡಿಯಲ್ಲಿ ಆಗಾಗ್ಗೆ ಗುಂಡಿನ ಚಕಮಕಿ ನಡೆಸುತ್ತವೆ. ಅರೇಬಿಯನ್ ಸಮುದ್ರಕ್ಕೆ ಪ್ರವೇಶವನ್ನು ಒದಗಿಸುವ ಬಲೂಚಿಸ್ತಾನ್ ಸೇರಿದಂತೆ ಪಶ್ತೂನ್ ಪ್ರದೇಶಗಳನ್ನು ಹಿಂದಿರುಗಿಸಲು ಅಫ್ಘಾನಿಸ್ತಾನ ಬಯಸುತ್ತದೆ. 2017ರಲ್ಲಿ ಪಾಕ್ ಗಡಿಯಲ್ಲಿ ತಡೆಗೋಡೆ ನಿರ್ಮಿಸಿದಾಗ ಈ ವಿವಾದ ಇನ್ನಷ್ಟು ಉಲ್ಬಣಗೊಂಡಿತು, (ಏಜೆನ್ಸೀಸ್).