ನ್ಯೂಸ್

ತಾಲಿಬಾನ್ ವಶಕ್ಕೆ ಪಂಜ್​ಶೀರ್; ನಾವು ಸೋತಿಲ್ಲವೆಂದ ಎನ್​ಆರ್​ಎಫ್, ದಂಗೆ ಎದ್ದರೆ ಹುಶಾರ್ ಎಂದ ತಾಲಿಬಾನ್

ಕಾಬುಲ್: ಅಫ್ಘಾನಿಸ್ತಾನದ ಪಂಜ್​ಶೀರ್ ಪ್ರಾಂತ್ಯ ಕೂಡ ಸೋಮವಾರ ತಾಲಿಬಾನ್ ವಶಕ್ಕೆ ಬಂದಿದೆ. ಈ ಮೂಲಕ ಇಡೀ ದೇಶ ತಾಲಿಬಾನ್ ಹಿಡಿತಕ್ಕೆ ಬಂದಂತಾಗಿದೆ. ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ್ (ಎನ್​ಆರ್​ಎಫ್)ದ ಪ್ರಮುಖ ಕಮಾಂಡರ್​ಗಳು ಸತ್ತಿದ್ದಾರೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಆದರೆ, ಪಂಜ್​ಶೀರ್ ತಾಲಿಬಾನ್ ವಶಕ್ಕೆ ಬಂದಿಲ್ಲ. ನಾವು ಹೋರಾಡುತ್ತಿದ್ದೇವೆ ಎಂದು ಎನ್​ಆರ್​ಎಫ್ ಹೇಳಿದೆ.

ಅಮೆರಿಕ ಮತ್ತು ನ್ಯಾಟೊ ಪಡೆಗಳು ಆಗಸ್ಟ್ ಅಂತ್ಯಕ್ಕೆ ದೇಶ ತೊರೆಯುವುದು ನಿಶ್ಚಿತವಾದ ಬಳಿಕ, ಆಗಸ್ಟ್ 15ರ ವೇಳೆಗೆ ಅಫ್ಘನ್ 33 ಪ್ರಾಂತ್ಯಗಳು ತಾಲಿಬಾನ್ ಹಿಡಿತಕ್ಕೆ ಬಂದಿದ್ದವು. ಆದರೆ, ಎನ್​ಆರ್​ಎಫ್ ರಕ್ಷಣೆಯಲ್ಲಿದ್ದ ಗುಡ್ಡಗಾಡಿನಿಂದ ಕೂಡಿದ ಪ್ರಾಂತ್ಯ ಪಂಜ್​ಶೀರ್ ಮಾತ್ರ ತಾಲಿಬಾನ್​ಗೆ ವಶಕ್ಕೆ ಬಂದಿರಲಿಲ್ಲ. ಉತ್ತರ ಮೈತ್ರಿಪಡೆ ಮತ್ತು ಅಫ್ಘನ್​ನ ಭದ್ರತಾ ಪಡೆ ಮತ್ತು ಸ್ಥಳೀಯರನ್ನು ಒಳಗೊಂಡ ಗುಂಪು ಎನ್​ಆರ್​ಎಫ್. ಇದಕ್ಕೆ ತಾಲಿಬಾನ್ ವಿರುದ್ಧ ಹೋರಾಟ ನಡೆಸುತ್ತಿರುವ ಅಹ್ಮದ್ ಮಸೂದ್ (90ರ ದಶಕದಲ್ಲಿ ಸೋವಿಯತ್ ರಷ್ಯಾ ಮತ್ತು ತಾಲಿಬಾನ್ ವಿರುದ್ಧ ಹೋರಾಟ ನಡೆಸಿದ ಅಹ್ಮದ್ ಶಾ ಮಸೂದ್​ರ ಮಗ) ಮತ್ತು ಅಫ್ಘನ್ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲ್ಹೆ ನಾಯಕರು. ಮೂರು ವಾರದಿಂದ ಕೆಚ್ಚೆದೆಯ ಹೋರಾಟದಲ್ಲಿ ಅನೇಕರನ್ನು ಕಳೆದುಕೊಂಡಿದ್ದ ಎನ್​ಆರ್​ಎಫ್, ಭಾನುವಾರ ಕದನವಿರಾಮ ಬಯಸಿತ್ತು. ಆದರೆ ಸೋಮವಾರ ನಮ್ಮ ಯೋಧರು ಹೋರಾಟ ಮುಂದುವರಿಸಿದ್ದಾರೆ ಎಂದು ಟ್ವೀಟ್ ಮಾಡಿದೆ.

ಅಮ್ರುಲ್ಲಾ, ಮಸೂದ್ ಸುರಕ್ಷಿತ ಸ್ಥಳದಲ್ಲಿ ಪಂಜ್​ಶೀರ್ ಯುದ್ಧದಲ್ಲಿ ಅನೇಕರು ಮಡಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಫ್ಘನ್​ನ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲ್ಹೆ ವಾಸವಿದ್ದ ಮನೆ ಮೇಲೆ ತಾಲಿಬಾನ್​ಗಳು ಹೆಲಿಕಾಪ್ಟರ್​ನಿಂದ ಬಾಂಬ್ ಹಾಕಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ದಾಳಿ ನಡೆಯುವಷ್ಟರಲ್ಲಿ ಸಲ್ಹೆ ಮತ್ತು ಎನ್​ಎಆರ್​ಎಫ್​ನ ನಾಯಕ ಅಹ್ಮದ್ ಮಸೂದ್ ಅಜ್ಞಾತ ಸ್ಥಳಕ್ಕೆ ರವಾನೆ ಆಗಿದ್ದರು ಎಂದು ಮೂಲಗಳು ತಿಳಿಸಿವೆ. ಸತ್ತವರ ಪೈಕಿ ಎನ್​ಆರ್​ಎಫ್​ನ ವಕ್ತಾರ ಫಾಹಿಮ್ ದಷ್ಟಿ, ಪ್ರಮುಖ ಕಮಾಂಡರ್​ಗಳಾದ ಗುಲ್ ಹೈದರ್ ಖಾನ್, ಮುನಿಬ್ ಅಮೀರಿ, ಅಹ್ಮದ್ ಶಾ ಮಸೂದ್​ರ ಸಂಬಂಧಿ ಅಬ್ದುಲ್ಲಾ ವಡೂದ್ ಜರಾ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫಾಹಿಮ್ ಜಮಿಯಾತ್-ಎ-ಇಸ್ಲಾಮಿ ಪಕ್ಷದ ಹಿರಿಯ ನಾಯಕ ಮತ್ತು ಅಫ್ಘನ್ ಪತ್ರಕರ್ತರ ಒಕ್ಕೂಟದ ಸದಸ್ಯರೂ ಆಗಿದ್ದರು.

ತಾಲಿಬಾನ್​ಗೆ ಪಾಕಿಸ್ತಾನ ಸೇನೆ ನೆರವು: ಪಂಜ್​ಶೀರ್ ಹೋರಾಟಗಾರರ ವಿರುದ್ಧ ಯುದ್ಧಕ್ಕೆ ಪಾಕ್ ಸೇನೆ ತಾಲಿಬಾನ್​ಗೆ ನೆರವು ನೀಡಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಗುಡ್ಡಗಾಡು ಪ್ರದೇಶದಲ್ಲಿ ಹೋರಾಟ ನಿಪುಣರಾದ ಎನ್​ಆರ್​ಎಫ್​ನವರನ್ನು ತಾಲಿಬಾನ್ ಸುಲಭವಾಗಿ ಸದೆಬಡಿಯಲು ಸಾಧ್ಯವಿರಲಿಲ್ಲ. ಪಂಜ್​ಶೀರ್ ಕಣಿವೆಯನ್ನು ಸಂರ್ಪಸುವ ಎಲ್ಲ ರಸ್ತೆಗಳನ್ನು ಅವರನ್ನು ಬಂದ್ ಮಾಡಿ ಆಯಕಟ್ಟಿನ ಜಾಗದಲ್ಲಿ ಶಸ್ತ್ರ ಸಜ್ಜಿತರಾಗಿದ್ದರು. ತಾಲಿಬಾನಿಗಳು ಅವರನ್ನು ನೆಲ ಮಾರ್ಗದಲ್ಲಿ ಎದುರಿಸುವುದು ಕಷ್ಟದಾಯಕವಾಗಿತ್ತು. ಆದರೆ, ಅವರಿಗೆ ಹೆಲಿಕಾಪ್ಟರ್ ಅಥವಾ ವಿಮಾನ ಚಾಲನೆ ಅಷ್ಟಾಗಿ ತಿಳಿದಿಲ್ಲ. ಗುಡ್ಡಗಾಡಿನಲ್ಲಿ ಅವಿತು ದಾಳಿ ಮಾಡುವವರನ್ನು ಬಗ್ಗುಬಡೆಯಲು ಪಾಕ್ ಸೇನೆ ಹೆಲಿಕಾಪ್ಟರ್ ನೆರವನ್ನು ಮತ್ತು ಡ್ರೋನ್ ಮೂಲಕ ಪಂಜ್​ಶೀರ್​ನಲ್ಲಿ ಬಾಂಬ್​ಗಳನ್ನು ಹಾಕಿದೆ ಎಂದು ವರದಿ ತಿಳಿಸಿದೆ.

ಅಮೆರಿಕದ 6 ವಿಮಾನ ಅತಂತ್ರ: ಅಫ್ಘನ್​ನಿಂದ ಅಮೆರಿಕ ಸೇನೆ ವಾಪಸಾದ ಮೇಲೂ ಸುಮಾರು ಒಂದು ಸಾವಿರ ಅಮೆರಿಕನ್ನರು ಅಫ್ಘನ್​ನ ಮಜರ್-ಎ-ಷರೀಫ್ ನಗರದಲ್ಲಿ ಸ್ಥಳಾಂತರಕ್ಕಾಗಿ ಕಾಯುತ್ತಿದ್ದಾರೆ. ಇವರನ್ನು ಕರೆದೊಯ್ಯಲು ಆರು ಚಾರ್ಟರ್ ವಿಮಾನಗಳು ಸಿದ್ಧವಾಗಿದ್ದು, ಹಾರಾಟದ ಅನುಮತಿಯ ನಿರೀಕ್ಷೆಯಲ್ಲಿದೆ. ಆದರೆ, ತಾಲಿಬಾನ್​ಗಳು ಸಮ್ಮತಿ ನೀಡುತ್ತಿಲ್ಲ. ಈ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆ ಕೂಡ ಮುತುವರ್ಜಿ ತೋರುತ್ತಿಲ್ಲ ಎಂದು ಮೂಲಗಳು ಹೇಳಿವೆ. ಅಫ್ಘನ್​ನಿಂದ ವಿಮಾನ ಹೊರಡುವುದಕ್ಕೆ ತಾಲಿಬಾನ್​ಗಳ ಸಮ್ಮತಿ ಅಗತ್ಯ. ಆದರೆ, ಇದನ್ನು ಶೀಘ್ರದಲ್ಲಿ ದೊರಕಿಸಿಕೊಡಲು ಅಮೆರಿಕದ ವಿದೇಶಾಂಗ ಇಲಾಖೆ ಮುಂದಾಗುತ್ತಿಲ್ಲ. ಹೀಗಾಗಿ ಅಮೆರಿಕನ್ನರು ಆತಂಕದಲ್ಲಿ ದಿನದೂಡುವಂತಾಗಿದೆ. ಇವರಿಗೆ ಏನಾದರೂ ಅಪಾಯವಾದರೆ ಅದಕ್ಕೆ ವಿದೇಶಾಂಗ ಇಲಾಖೆಯೇ ಹೊಣೆ ಎಂದು ಸ್ಥಳಾಂತರ ಕಾರ್ಯದ ಸಂಘಟಕರು ದೂರಿದ್ದಾರೆ. ಸ್ಥಳಾಂತರ ಬಗ್ಗೆ ವಿದೇಶಾಂಗ ಇಲಾಖೆಯ ವಕ್ತಾರರು ಸಮರ್ಪಕ ಪ್ರತಿಕ್ರಿಯೆ ನೀಡಿಲ್ಲ. ಸ್ಥಳಾಂತರಕ್ಕಾಗಿ ಕಾಯುತ್ತಿರುವವರು ವಿಧೇಶಕ್ಕೆ ಹೋಗಲು ತಾಲಿಬಾನ್​ಗಳು ಅವಕಾಶ ನೀಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ತಾಲಿಬಾನ್ ಕ್ರಮಕ್ಕೆ ಇರಾನ್ ಖಂಡನೆ: ಪಂಜ್​ಶೀರ್ ಹೋರಾಟಗಾರರನ್ನು ತಾಲಿಬಾನ್ ಸದೆಬಡಿದಿರುವುದನ್ನು ಇರಾನ್ ತೀವ್ರವಾಗಿ ಖಂಡಿಸಿದೆ. ಪಂಜ್​ಶೀರ್ ಕಣಿವೆಯಿಂದ ಕೇಳಿಬರುತ್ತಿರುವ ಸುದ್ದಿ ನಿಜಕ್ಕೂ ಆಘಾತಕಾರಿ. ಹೋರಾಟಗಾರರ ವಿರುದ್ಧ ತಾಲಿಬಾನ್​ಗಳು ನಡೆಸುತ್ತಿರುವ ದೌರ್ಜನ್ಯ ಖಂಡನೀಯ. ಯಾವುದೇ ಸಮಸ್ಯೆ ಇದ್ದರೂ ಅದನ್ನು ಅಫ್ಘನ್ ಹಿರಿಯ ಸಮ್ಮುಖದಲ್ಲಿ ಕುಳಿತು ರ್ಚಚಿಸಿ ಪರಿಹರಿಸಿಕೊಳ್ಳಬಹುದು ಎಂದು ಇರಾನ್ ವಿದೇಶಾಂಗ ವಕ್ತಾರ ಸಯೀದ್ ಖತಿಬ್ಜದೇಹ್ ಹೇಳಿದ್ದಾರೆ.

ಅಫ್ಘನ್ ಬಿಕ್ಕಟ್ಟಿನ ಬಗ್ಗೆ ಮೋದಿ ಚರ್ಚೆ: ಅಫ್ಘನ್ ಬಿಕ್ಕಟ್ಟಿನ ಕುರಿತು ಪ್ರಧಾನಿ ನರೇಂದ್ರ ಮೋದಿ ಸಚಿವರಾದ ರಾಜನಾಥ ಸಿಂಗ್, ಅಮಿತ್ ಷಾ, ಎಸ್.ಜೈಶಂಕರ್, ನಿರ್ಮಲಾ ಸೀತಾರಾಮನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜತೆ ಸೋಮವಾರ ಚರ್ಚೆ ನಡೆಸಿದ್ದಾರೆ. ಅಫ್ಘನ್​ನ ಪರಿಸ್ಥಿತಿ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿರುವುದು, ಪಂಜ್​ಶೀರ್ ಈಗ ತಾಲಿಬಾನ್ ವಶಕ್ಕೆ ಬಂದಿರುವುದು, ಪಾಕ್ ಐಎಸ್​ಐ ಮುಖ್ಯಸ್ಥ ತಾಲಿಬಾನ್ ನಾಯಕರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಮಧ್ಯಸ್ಥಿಕೆ ವಹಿಸಿರುವ ಬೆಳವಣಿಗೆ ಕುರಿತು ಮೋದಿ ಮಾಹಿತಿ ಪಡೆದುಕೊಂಡಿದ್ದಾರೆ.

ಬಗೆಹರಿಯದ ಸರ್ಕಾರ ರಚನೆ ಗೊಂದಲ: ತಾಲಿಬಾನ್​ಗಳು ಅಫ್ಘನ್​ನಲ್ಲಿ ಹಿಡಿತ ಸಾಧಿಸಿ ಮೂರು ವಾರಗಳಾದರೂ ಸರ್ಕಾರ ರಚನೆ ಸಾಧ್ಯವಾಗಿಲ್ಲ. ತಾಲಿಬಾನ್ ನಾಯಕರು ಮತ್ತು ಹಕ್ಕಾನಿ ಜಾಲದ ನಡುವಿನ ಗೋಜಲು ಬಗೆಹರಿದಿಲ್ಲ. ಹಾಗಾಗಿ ಹೊಸ ಸರ್ಕಾರ ರಚನೆ ಕಂಗ್ಗಟಾಗಿದೆ. ಕೆಲವು ದಿನಗಳಲ್ಲೇ ಹೊಸ ಸರ್ಕಾರ ರಚನೆ ಆಗಲಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸೋಮವಾರ ಮತ್ತೆ ಹೇಳಿದ್ದಾನೆ. ಇಸ್ಲಾಮಿಕ್ ನಿಯಮದಂತೆಯೇ ಕಟ್ಟಾ ಸಂಪ್ರದಾಯವಾದಿ ಸರ್ಕಾರವೇ ರಚನೆ ಆಗಬೇಕು ಎಂಬುದು ಹಕ್ಕಾನಿ ನಾಯಕರು ಪಟ್ಟು ಹಿಡಿದಿದ್ದಾರೆ. ಆದರೆ, ತಾಲಿಬಾನ್​ನ ಸೌಮ್ಯವಾದಿ ನಾಯಕರು ಎಲ್ಲರನ್ನು ಒಳಗೊಂಡ ಸುಧಾರಣಾವಾದಿ ಸರ್ಕಾರ ರಚಿಸುವ ಚಿಂತನೆಯಲ್ಲಿದ್ದಾರೆ. ಹೀಗಾಗಿ ಸಂಘರ್ಷ ಏರ್ಪಟ್ಟಿದೆ. ಮೊದಲು ಮಧ್ಯಂತರ ಸರ್ಕಾರ ರಚಿಸಿ, ಬಳಿಕ ಭಿನ್ನಾಭಿಪ್ರಾಯಗಳನ್ನ ಬಗೆ ಹರಿಸಿಕೊಂಡು ಪೂರ್ಣಪ್ರಮಾಣದ ಸರ್ಕಾರ ರಚಿಸುವುದು ತಾಲಿಬಾನ್​ಗಳ ಸಲಹೆ ಆಗಿದೆ. ಸರ್ಕಾರ ರಚನೆ ಅಧಿಕಾರ ಹಂಚಿಕೆ ಕುರಿತು ಈ ಹಿಂದೆ ನಡೆದ ಸಭೆಯಲ್ಲಿ ಕೆಲವು ಹಕ್ಕಾನಿ ಮುಂಖಡರು, ಸಭೆಯಲ್ಲಿ ಗುಂಡು ಹಾರಿಸಿದ್ದರಿಂದ ತಾಲಿಬಾನ್ ಸಹಸಂಸ್ಥಾಪಕ ಮತ್ತು ಸರ್ಕಾರದ ನೇತೃತ್ವ ವಹಿಸಲಿದ್ದಾರೆ ಎಂದು ಹೇಳಲಾದ ಮುಲ್ಲ ಅಬ್ದುಲ್ಲಾ ಘನಿ ಬರದಾರ್ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ, ತಾಲಿಬಾನ್ ಮತ್ತು ಅವರ ಮಿತ್ರರಲ್ಲಿ ಒಮ್ಮತ ಮೂಡಿಸಲು ಪಾಕ್​ನ ಐಎಸ್​ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಕಾಬುಲ್​ಗೆ ಬಂದಿದ್ದು, ಮುಲ್ಲಾ ಅಬ್ದುಲ್ಲಾ ಘನಿ ಬರಾದರ್ ಅವರನ್ನು ಭೇಟಿಯಾಗಿರುವುದು ನಿಜ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾನೆ. ಪಾಕ್ ಮತ್ತು ಅಫ್ಘನ್​ಗಳ ಸಂಬಂಧ ಸುಧಾರಣೆ, ಗಡಿಯಲ್ಲಿ ಅಫ್ಘನ್ ವಲಸಿಗರ ಸಮಸ್ಯೆ ಕುರಿತು ಹಮೀದ್ ರ್ಚಚಿಸಿದರು ಎಂದು ತಾಲಿಬಾನ್​ನ ಸಾಂಸ್ಕೃತಿಕ ಸಯೋಗದ ಉಪಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಹೇಳಿದ್ದಾನೆ. ಪಾಕ್ ವಿರುದ್ಧ ಕಾರ್ಯಗಳಿಗೆ ಅಫ್ಘನ್ ನೆಲ ಬಳಕೆಯಾಗಲುಬಿಡುವುದಿಲ್ಲ ಎಂದು ತಾಲಿಬಾನ್​ಗಳು ಹಮೀದ್​ಗೆ ಭರವಸೆ ನೀಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಹೊಸ ಆಡಳಿತದ ಜತೆ ಹೆಜ್ಜೆ ಹಾಕಿ: ಅಫ್ಘನ್ ಸೇನೆಯಲ್ಲಿದ್ದ ಯೋಧರು ತಾಲಿಬಾನ್ ವಿರೋಧವನ್ನು ಬಿಟ್ಟು ಹೊಸ ಆಡಳಿತದ ಜತೆಗೆ ಹಜ್ಜೆ ಹಾಕಬೇಕು. ಅಫ್ಘನ್ ಯೋಧರು 20 ವರ್ಷ ಸೇನಾ ತರಬೇತಿ ಪಡೆದಿದ್ದಾರೆ. ಅವರು ಭದ್ರತಾ ಪಡೆಗಳಿಗೆ ಹಿಂದೆ ಇದ್ದ ಹುದ್ದೆಗೆ ಮರಳಬಹುದು ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾನೆ.

ಪಂಜ್​ಶೀರ್ ಕಣಿವೆಯನ್ನು ಗೆದ್ದಿದ್ದೇವೆ. ಅಲ್ಲಿನ ಗವರ್ನರ್ ನಿವಾಸದ ಮೇಲೆ ಧ್ವಜ ಹಾರಿಸುವ ಮೂಲಕ ಯುದ್ಧ ಕೊನೆಗೊಂಡಿದೆ. ಇಸ್ಲಾಮಿಕ್ ಎಮಿರೇಟ್ಸ್ ವಿರುದ್ಧ ದಂಗೆ ಏಳುವ ಪ್ರಯತ್ನ ನಡೆಸಿದರೆ ಅಂಥವರನ್ನು ಶಿಕ್ಷಿಸಲಾಗುವುದು. ನಾವು ಪರ್ಯಾಯ ಆಡಳಿತವನ್ನು ಸಹಿಸುವುದಿಲ್ಲ. ಸರ್ಕಾರ ರಚನೆಯ ತಾಂತ್ರಿಕ ವಿಷಯಗಳ ಬಗ್ಗೆ ಗಮನ ನೀಡಲಾಗಿದೆ. ಶೀಘ್ರದಲ್ಲೇ ಹೊಸ ಸರ್ಕಾರ ರಚನೆ ಆಗಲಿದೆ.

| ಜಬಿಹುಲ್ಲಾ ಮುಜಾಹಿದ್ ತಾಲಿಬಾನ್ ಮುಖ್ಯ ವಕ್ತಾರ

ಪಂಜ್​ಶೀರ್ ವಶ ಪಡಿಸಿಕೊಂಡಿದ್ದೇವೆ ಎಂಬ ತಾಲಿಬಾನ್ ಹೇಳಿಕೆ ಸುಳ್ಳು, ಕಣಿವೆಯ ಎಲ್ಲ ಆಯಕಟ್ಟಿನ ಭಾಗಗಳಲ್ಲಿ ಎನ್​ಆರ್​ಎಫ್ ಯೋಧರು ಹೋರಾಟ ಮುಂದುವರಿಸಿದ್ದಾರೆ. ತಾಲಿಬಾನ್ ಮತ್ತು ಅವರ ಮಿತ್ರರ ವಿರುದ್ಧ ನ್ಯಾಯ ಮತ್ತು ಸ್ವಾತಂತ್ರ್ಯ ದೊರಕುವವರೆಗೂ ಹೋರಾಟ ಮಾಡುತ್ತೇವೆ.

| ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನ್