ನವದೆಹಲಿ: ಮತದಾನೋತ್ತರ ಸಮೀಕ್ಷೆ ತಪ್ಪಾಗಲು ತಾವು ಕೊನೆಯ ಮೂರು ಹಂತದ ಚುನಾವಣೆಗಳಲ್ಲಿ ಉತ್ತರ ಪ್ರದೇಶವನ್ನು ಲಘುವಾಗಿ ಪರಿಗಣಿಸಿದ್ದೇ ಕಾರಣ ಎಂದು ಆಕ್ಸಿಸ್ ಮೈ ಇಂಡಿಯಾ ಮುಖ್ಯಸ್ಥ ಪ್ರದೀಪ್ ಗುಪ್ತಾ ತಿಳಿಸಿದ್ದಾರೆ.
'ಆಕ್ಸಿಸ್ ಮೈ ಇಂಡಿಯಾ' ತನ್ನ ಸಮೀಕ್ಷೆಯನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಲೋಕಸಭೆ ಚುನಾವಣೆಯಲ್ಲಿ 361-400 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಉತ್ತರ ಪ್ರದೇಶದದಲ್ಲಿ 67 ಸ್ಥಾನಗಳು ಬರುತ್ತವೆ ಎಂದು ಹೇಳಿತ್ತು. ಆದರೆ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಸಿಕ್ಕಿದ್ದು ಕೇವಲ 240 ಸ್ಥಾನ. ನಿರ್ಣಾಯಕ ರಾಜ್ಯದವಾದ ಉತ್ತರಪ್ರದೇಶ ಅದು ಗಳಿಸಿದ್ದು ಕೇವಲ 33 ಸ್ಥಾನ ಮಾತ್ರ.
ಪಿಟಿಐ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಗುಪ್ತಾ ಅವರು, ತಮ್ಮ ಸಂಸ್ಥೆ ಮತದಾನೋತ್ತರ ಸಮೀಕ್ಷೆಯ ಮಾರ್ಗಗಳು ತಪ್ಪಾಗಿಲ್ಲ. ಬದಲಿಗೆ ನಿರ್ಣಾಯಕ ರಾಜ್ಯಗಳಿಗೆ ಸಂಪನ್ಮೂಲಗಳನ್ನು ವಿನಿಯೋಗಿಸುವುದರಲ್ಲಿ ತಪ್ಪಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಸರ್ಕಾರ ರಚನೆ ಮಾಡಿದ್ದರೂ ಕೂಡ ನಾವು ಹೇಳಿದ್ದ ಸ್ಥಾನಗಳಿಗೂ ವಾಸ್ತವದಲ್ಲಿ ಬಿಜೆಪಿ ಗಳಿಸಿದ ಸ್ಥಾನಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮ ಸಮೀಕ್ಷೆ ತಪ್ಪಾಗಿದೆ. ನಮಗೆ ದೊಡ್ಡ ಮಟ್ಟದಲ್ಲಿ ಕೈ ಕೊಟ್ಟ ರಾಜ್ಯಗಳೆಂದರೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಅವರು ಹೇಳಿದರು.
"2019 ರಲ್ಲಿ ನಮ್ಮ ಸಮೀಕ್ಷೆ ನಿಜವಾಗಿತ್ತು. ಈ ಬಾರಿ ನಾವು ಒಡಿಶಾ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದವು. ಅಲ್ಲಿ ನಮ್ಮ ಸಮೀಕ್ಷೆ ಸರಿಯಾಗಿದೆ, 2024ರ ಲೋಕಸಭೆ ಚುನಾವಣೆ ನಮಗೆ ಪಾಠವಾಗಿದ್ದು ಯಾವ ರಾಜ್ಯವನ್ನು ಲಘುವಾಗಿ ಪರಿಗಣಿಸಬಾರದು ಎನ್ನುವುದನ್ನು ಕಲಿತಿದ್ದೇವೆ ಎಂದು ಹೇಳಿದರು.