ನ್ಯೂಸ್

ಹೆಚ್ಚು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ: ಕೋವಿಡ್​ ಕೇಸ್​ ಹೆಚ್ಚಿರುವ ರಾಜ್ಯಗಳಿಗೆ ಪ್ರಧಾನಿ ಸೂಚನೆ

ನವದೆಹಲಿ: ಮತ್ತೆ ಮಹಾಮಾರಿ ಕರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು, ಸಂಭವನೀಯ ಮೂರನೇ ಅಲೆಯನ್ನು ತಡೆಯಲು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದರು.

ಹೆಚ್ಚು ಕರೊನಾ ಪಾಸಿಟಿವಿಟಿ ದರ ಇರುವ ಆರು ರಾಜ್ಯಗಳ ಮುಖ್ಯಮಂತ್ರಿಗಳ ಜತೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಸಭೆಯಲ್ಲಿ ಪ್ರಧಾನಿ ಮಾತನಾಡುತ್ತಾ, ಕರೊನಾ ಹೋಗಲಾಡಿಸಲು ರಾಜ್ಯಗಳಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.

ಸಭೆಯಲ್ಲಿ ತಮಿಳುನಾಡು ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ಒಡಿಶಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಭಾಗವಹಿಸಿದರು. ಅನೇಕ ರಾಜ್ಯಗಳಲ್ಲಿ ಇತ್ತೀಚೆಗೆ ಕರೊನಾ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದ್ದು, ಕರೊನಾ ಮೂರನೇ ಅಲೆಯ ಭೀತಿ ಶುರುವಾಗಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಂಭವನೀಯ ಮೂರನೇ ಅಲೆಯ ಬಗ್ಗೆ ಮಾತನಾಡುವ ಹಂತದಲ್ಲಿ ನಾವಿದ್ದೇವೆ. ಕಳೆದ ಕೆಲವು ದಿನಗಳಿಂದ ಈ ಆರು ರಾಜ್ಯಗಳಲ್ಲಿ ಶೇ 80 ರಷ್ಟು ಹೊಸ ಕರೊನಾ ಪ್ರಕರಣಗಳು ವರದಿಯಾಗಿವೆ ಎಂದರು.

'ಟೆಸ್ಟ್​-ಟ್ರ್ಯಾಕ್​-ಟ್ರೀಟ್-ವ್ಯಾಸಿನೇಟ್​'​ ಅನ್ನು ವೇಗಗೊಳಿಸುವ ಮೂಲಕ ಕರೊನಾವನ್ನು ತಹಬದಿಗೆ ತನ್ನಿ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 23,000 ಕೋಟಿ ರೂ. ತುರ್ತು ಪರಿಹಾರವನ್ನು ರಾಜ್ಯಗಳು ಕಡ್ಡಾಯವಾಗಿ ಉಪಯೋಗಿಸಲೇ ಬೇಕು. ಅದರಿಂದ ಆರೋಗ್ಯ ಮೂಲಸೌಕರ್ಯಗಳ ಕೊರತೆಯನ್ನು ನೀಗಿಸಿ ಎಂದು ಸೂಚನೆ ನೀಡಿದರು.

ನಗರ ಮತ್ತು ಪಟ್ಟಣಗಳಲ್ಲಿ ಓಡಾಡುವವರು ಮಾಸ್ಕ್​ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದನ್ನು ನೋಡಿ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದು, ಕೋವಿಡ್​ ಇನ್ನು ಮುಗಿದಿಲ್ಲ ಎಂಬುದನ್ನು ಜನರಿಗೆ ಅಧಿಕಾರಿಗಳು ಮನವರಿಕೆ ಮಾಡಬೇಕೆಂದು ಸೂಚಿಸಿದರು.

ಕರ್ನಾಟಕದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ: ಕೆ: ಸುಧಾಕರ್, ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡರು.