ರಾಜ್ಯದ ಹಲವೆಡೆ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಆಗಾಗ ಕಳವಳ ವ್ಯಕ್ತವಾಗುತ್ತಲೇ ಇದೆ. ಆದರೆ, ಅಕ್ರಮ ಮರಳು ಗಣಿಗಾರಿಕೆಯಿಂದ ಕೃಷ್ಣಾ ನದಿಯೇ ಕೃಶವಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸಾರುತ್ತಿದೆ. ಅಲ್ಲದೆ, ಸಮಾಜದ ದುಷ್ಟಶಕ್ತಿಗಳು ಮತ್ತು ಮಾಫಿಯಾ ಕಾನೂನಿಗೆ ಹೆದರದೆ, ನಿಯಮಗಳಿಗೆ ಬಗ್ಗದೆ ಈ ಬಗೆಯ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ಆತಂಕಕಾರಿ ವಿದ್ಯಮಾನ. ಇತ್ತೀಚಿನ ವರ್ಷಗಳಲ್ಲಿ ಮರಳು ಮಾಫಿಯಾ ನದಿಗಳ ಒಡಲನ್ನು ವೇಗವಾಗಿ ಖಾಲಿ ಮಾಡುತ್ತಿದೆ. ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದಾಗಿದೆ, ಕೆಲ ಜನಪ್ರತಿನಿಧಿಗಳು ಆಗಾಗ ದನಿಎತ್ತಿದ್ದಾರೆ. ಹೀಗಿರುವಾಗಲೂ, ಸಮಸ್ಯೆ ನಿಯಂತ್ರಣಕ್ಕೆ ಬರುವ ಬದಲು ಮತ್ತಷ್ಟು ವಿಕೋಪಕ್ಕೆ ಹೋಗುತ್ತಿದೆ ಎಂದರೆ, ಕಠಿಣ ಹಾಗೂ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ. ಈ ನಿಟ್ಟಿನಲ್ಲಿ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಮತ್ತು ಅಕ್ರಮ ಮರಳು ಗಣಿಗಾರಿಕೆ ಜಾಲಗಳ ವಿರುದ್ಧ ಪ್ರಹಾರ ನಡೆಸಬೇಕು. ಇಲ್ಲದಿದ್ದಲ್ಲಿ ಕೃಷ್ಣಾ ನದಿಯ ಸ್ಥಿತಿಯೇ ರಾಜ್ಯದ ಇತರ ನದಿಗಳಿಗೂ ಬರಬಹುದು. ಹಾಗಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.
ಮರಳು ಬಗೆಯುವಿಕೆಯಿಂದ ಕೃಷ್ಣಾ ನದಿಯ ಹರಿವು ಮತ್ತು ಸ್ವರೂಪವೇ ಬದಲಾಗುವ ಆತಂಕ ಸೃಷ್ಟಿಯಾಗಿದೆ. ಅಷ್ಟೇ ಅಲ್ಲ, ನೀರು ಮಲಿನವಾಗಿ ಜನಾರೋಗ್ಯ, ಒಟ್ಟಾರೆ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಭೂ, ನೀರಾವರಿ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಗೆ ಪ್ರಭಾವಿಗಳ ರಕ್ಷಣೆ ಇರುವುದರಿಂದ ಈ ದಂಧೆ ಕಡಿವಾಣವಿಲ್ಲದೆ ನಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು. ಅಧಿಕಾರಿಗಳು ಆಗಾಗ್ಗೆ ಎಚ್ಚೆತ್ತುಕೊಂಡು, ಒಂದಿಷ್ಟು ಚಾಟಿ ಬೀಸುತ್ತಾರಾದರೂ, ಇಂಥ ಕ್ರಮಗಳು ನಿರಂತರತೆ ಕಾಯ್ದುಕೊಳ್ಳದೆ ಇರುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ದಂಧೆಯ ಜಾಲವು ನೇರವಾಗಿ ಹೈದರಾಬಾದ್, ಮಹಾರಾಷ್ಟ್ರದ ಸೋಲಾಪುರ, ಸಾಂಗ್ಲಿ, ಮೀರಜ್ವರೆಗೆ ಚಾಚಿಕೊಂಡಿದೆ. ಆಸುಪಾಸಿನ ಸ್ಥಳಗಳಲ್ಲಿ 30 ಟನ್ನ ಒಂದು ಟಿಪ್ಪರ್ ಉಸುಕಿಗೆ 55 ರಿಂದ 60 ಸಾವಿರ ರೂ., ಕಲಬುರಗಿ ಜಿಲ್ಲೆಯಲ್ಲಿ 80 ಸಾವಿರದಿಂದ ಒಂದು ಲಕ್ಷ ರೂ.ವರೆಗಿದೆ. ಬೇರೆ ರಾಜ್ಯಗಳಲ್ಲಿ ಒಂದೂವರೆ ಲಕ್ಷ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.
ಹಿಟಾಚಿ, ಜೆಸಿಬಿ ಮತ್ತಿತರ ಯಂತ್ರೋಪಕರಣ, ಟಿಪ್ಪರ್, ಟ್ರಾ್ಯಕ್ಟರ್ಗಳನ್ನು ನದಿಗೆ ಇಳಿಸಬಾರದು, ನದಿಯಲ್ಲಿ ಎರಡು ಅಡಿಗಿಂತ ಹೆಚ್ಚು ಆಳ ತೋಡಬಾರದು, ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಪರವಾನಗಿ ಪಡೆದಷ್ಟು ಮರಳು ಸಾಗಿಸಬೇಕು ಎಂಬೆಲ್ಲ ನಿಯಮಗಳಿದ್ದರೂ, ಅವುಗಳನ್ನು ಗಾಳಿಗೆ ತೂರಲಾಗಿದೆ. ನದಿಯ ಒಡಲು ಮಲಿನವಾದರೆ, ಅದರಿಂದ ಸೃಷ್ಟಿಯಾಗುವ ಸಮಸ್ಯೆಗಳು ಒಂದೆರಡಲ್ಲ. ಪ್ರಕೃತಿಯನ್ನು ಶೋಷಿಸಬಾರದು ಎಂಬ ಎಚ್ಚರಿಕೆಯನ್ನು ನಿಸರ್ಗವೇ ಹಲವಾರು ಬಾರಿ ನೀಡಿದರೂ ಮನುಷ್ಯ ಪಾಠ ಕಲಿಯುತ್ತಿಲ್ಲ. ಇಂಥ ಕೃತ್ಯಗಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬ ವಾಸ್ತವವನ್ನು ಮರೆತು, ಕೆಲ ಪ್ರಭಾವಿಗಳು ಅಕ್ರಮಕ್ಕೆ ಸಹಕರಿಸುತ್ತಿರುವುದು ಸರಿಯಲ್ಲ. ಮುಖ್ಯವಾಗಿ, ಅಕ್ರಮ ಮರಳು ಗಣಿಗಾರಿಕೆ ತಡೆಯಲು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ, ದುಷ್ಟಶಕ್ತಿಗಳಿಗೆ ಕಡಿವಾಣ ಹಾಕಲು ಸಾಧ್ಯ. ಕೃಷ್ಣೆಯನ್ನು, ಇತರ ನದಿಗಳನ್ನು ಉಳಿಸಿಕೊಳ್ಳುವ ಸಾಮೂಹಿಕ ಪ್ರಯತ್ನ ನಡೆಯಲಿ.