ನ್ಯೂಸ್

ಕಣ್ಮರೆಯಾಗಿದ್ದ ನಿಜಾಮುದ್ದೀನ್ ಮರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್​ ಪತ್ತೆ: ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?

ನವದೆಹಲಿ: ಕರೊನಾ ವಿವಾದದ ಬಳಿಕ ತಲೆಮರೆಸಿಕೊಂಡಿದ್ದ ತಬ್ಲಿಘಿ ಜಮಾತ್​ನ ನಿಜಾಮುದ್ದೀನ್ ಮರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್​ ಸುಳಿವು ಕೊನೆಗೂ ದೊರಕಿದ್ದು, ದೆಹಲಿಯ ಜಾಕೀರ್​ ನಗರದ ಧಾರ್ಮಿಕ ಸ್ಥಳದಲ್ಲಿದ್ದ ಸಾದ್​ರನ್ನು ತಾಂತ್ರಿಕ ಕಣ್ಗಾವಲು ಸಾಧನದಿಂದ ಪೊಲೀಸರು ಬುಧವಾರ ಪತ್ತೆಹಚ್ಚಿದ್ದಾರೆ.

ಇಸ್ಲಾಮಿಕ್​​ ಸಂಘಟನೆಗೆ ಸೇರಿದ್ದ ನಿಜಾಮುದ್ದೀನ್​ ಕಾಂಪ್ಲೆಕ್ಸ್​ನಲ್ಲಿ ತಬ್ಲಿಘಿ ಜಮಾತ್​ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಾದ ಬಳಿಕ ತಬ್ಲಿಘಿ ಜಮಾತ್​ ಕರೊನಾ ಹಾಟ್​ಸ್ಪಾಟ್​ ಆಗಿ ಹೊರಹೊಮ್ಮಿ ವಿವಾದಕ್ಕೆ ಗುರಿಯಾಗಿತ್ತು. ದೇಶವ್ಯಾಪಿ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಮೌಲಾನಾ ಸಾದ್​ ನಾಪತ್ತೆಯಾಗಿದ್ದರು. 600ಕ್ಕೂ ಹೆಚ್ಚು ಕರೊನಾ ಪ್ರಕರಣಗಳ ತಬ್ಲಿಘಿ ಜಮಾತ್​ನಿಂದ ವರದಿಯಾಗಿವೆ.

ಸದ್ಯ ಪೊಲೀಸರು ಕೈಗೆ ಸಿಕ್ಕಿಬಿದ್ದಿರುವ ಮೌಲಾನಾ ಸಾದ್​, ನಾನು ಸ್ವಯಂ ಪ್ರತ್ಯೇಕವಾಗಿದ್ದೇನೆ, ಹೀಗಾಗಿ ಪೊಲೀಸ್​ ತನಿಖೆ ಎದುರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಮೌಲಾನಾ ಸಾದ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೆಲ ದಾಖಲಾತಿಗಳು ಹಾಗೂ ಆತನ ಬಳಿಯಿರುವ ಎಲೆಕ್ಟ್ರಾನಿಕ್​​ ಸಾಧನಗಳನ್ನು ಒಪ್ಪಿಸುವಂತೆ ಕೇಳಿದ್ದಾರೆ. ಆದರೆ, ಲಾಕ್​ಡೌನ್​ನಿಂದಾಗಿ ದಾಖಲಾತಿಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಸಾದ್​ ಪರ ವಕೀಲರು ಸಮಾಜಾಯಿಷಿ ನೀಡಿದ್ದಾರೆ.

14 ದಿನಗಳ ಕ್ವಾರಂಟೈನ್​ ಬಳಿಕ ತನಿಖೆಗೆ ಸಹಕರಿಸುವಂತೆ ದೆಹಲಿ ಪೊಲೀಸರು ಮೌಲಾನಾ ಸಾದ್​ಗೆ ತಿಳಿಸಿದ್ದಾರೆ. (ಏಜೆನ್ಸೀಸ್​)