ವುಹಾನ್: ಕರೊನಾ ವೈರಸ್ ಕಾಟಕ್ಕೆ ಈಗಾಗಲೇ ಕಂಗಾಲಾಗಿ, ಇನ್ನು ಕೂಡ ಚೇತರಿಸಿಕೊಳ್ಳದ ಚೀನಾದಲ್ಲಿ ಇದೀಗ ಹ್ಯಾಂಟಾ ವೈರಸ್ ಸದ್ದು ಕೇಳಿಬರುತ್ತಿದೆ. ಸೋಮವಾರವಷ್ಟೇ ಇದೇ ವೈರಸ್ಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಕೆಲಸಕ್ಕಾಗಿ ಪೂರ್ವ ಶಾನ್ಡಂಗ್ ಪ್ರಾಂತ್ಯದೆಡೆಗೆ ಬಸ್ಸಿನಲ್ಲಿ ಬರುವಾಗ ವ್ಯಕ್ತಿ ಮೃತಪಟ್ಟಿರುವುದಾಗಿ ಚೀನಾ ಮಾಧ್ಯಮಗಳು ವರದಿ ಮಾಡಿವೆ.
ಮೃತನ ಕಾರಣಕ್ಕಾಗಿ ಬಸ್ಸಿನಲ್ಲಿದ್ದ 32 ಮಂದಿಯನ್ನು ಪರೀಕ್ಷಿಸಲಾಗಿದೆ. ಸದ್ಯ ಕರೊನಾ ಬೆನ್ನಲ್ಲೇ ಚೀನಾದಲ್ಲಿ ಹ್ಯಾಂಟಾ ವೈರಸ್ ಕೂಗು ಕೇಳಿಬರುತ್ತಿರುವುದರಿಂದ ಅದರ ಬಗ್ಗೆ ಒಂದು ಸಣ್ಣ ಪರಿಚಯ ಮಾಡಿಕೊಂಡರೆ ಒಳಿತು.
ಹ್ಯಾಂಟಾ ವೈರಸ್ ಎಂದರೇನು?
ಅಮೆರಿಕದ ಮುಂಚೂಣಿಯಲ್ಲಿರುವ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿಡಿಸಿ) ಪ್ರಕಾರ ಹ್ಯಾಂಟಾ ವೈರಸ್ ದಂಶಕಗಳಿಂದ ಹರಡುವ ವೈರಸ್ ಗುಂಪು ಸಮೂಹಕ್ಕೆ ಸೇರಿದ್ದು. ಜಾಗತಿಕವಾಗಿ ಇದು ಜನರಲ್ಲಿ ವಿವಿಧ ರೋಗಳನ್ನು ಹರಡುತ್ತದೆ.
ಅಮೆರಿಕದಲ್ಲಿ ಹ್ಯಾಂಟಾ ವೈರಸ್ "ನ್ಯೂ ವರ್ಲ್ಡ್" ಎಂದೇ ಪರಿಚಿತ. ಹ್ಯಾಂಟಾ ವೈರಸ್ ಪಲ್ಮನರಿ ಸಿಂಡ್ರೋಮ್ (ಎಚ್ಪಿಎಸ್)ಗೆ ಕಾರಣವಾಗಲಿದೆ. ಇದು ಯೂರೋಪ್ ಮತ್ತು ಏಷ್ಯಾದಲ್ಲಿ ಹೆಚ್ಚಾಗಿ ಪತ್ತೆಯಾಗಿದೆ. ಇದು ಮೂತ್ರಪಿಂಡದ ಕಾಯಿಲೆಯೊಂದಿಗೆ ರಕ್ತಸ್ರಾವ ಜ್ವರವನ್ನು ಉಂಟುಮಾಡಬಹುದು
ಹ್ಯಾಂಟಾ ವೈರಸ್ ಹೇಗೆ ಹರಡುತ್ತದೆ?
ಪ್ರತಿಯೊಂದು ಹ್ಯಾಂಟಾವೈರಸ್ ಸಿರೊಟೈಪ್ ನಿರ್ದಿಷ್ಟ ದಂಶಕ ಜಾತಿಗಳನ್ನು ಹೊಂದಿದೆ. ಮೂತ್ರ, ಮಲ ಮತ್ತು ಸಲೈವಾ ಹಾಗೂ ಸೋಂಕಿತ ವ್ಯಕ್ತಿ ಕಡಿದರೆ ವೈರಸ್ ಹರಡುತ್ತದೆ. ಆದರೆ, ಮಾನವನಿಂದ ಮಾನವನಿಗೆ ತಗುಲುತ್ತದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ.
ರೋಗದ ಲಕ್ಷಣಗಳೇನು?
ಪ್ರಾರಂಭದ ಲಕ್ಷಣಗಳಲ್ಲಿ ಆಯಾಸ, ಜ್ವರ ಹಾಗೂ ಸ್ನಾಯು ನೋವು ಕಂಡುಬರುತ್ತದೆ. ತೊಡೆಗಳು, ಸೊಂಟ, ಹಿಂಭಾಗ ಮತ್ತು ಕೆಲವೊಮ್ಮೆ ತೋಳಿನ ಸ್ನಾಯುಗಳು ಕೂಡ ನೋಯುತ್ತದೆ. ಇದು ಹ್ಯಾಂಟಾ ವೈರಸ್ನ ಸಾಮಾನ್ಯ ಲಕ್ಷಣಗಳಾಗಿವೆ.
ಇದಲ್ಲದೆ, ತಲೆ ನೋವು, ತಲೆ ತಿರುಗುವಿಕೆ, ಶೀತ ಮತ್ತು ಉದರ ಸಂಬಂಧಿ ತೊಂದರೆ, ವಾಂತಿ, ಭೇಧಿ ಮತ್ತು ಹೊಟ್ಟೆ ನೋವಿನ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. 4 ರಿಂದ 10 ದಿನಗಳ ನಂತರ ಪ್ರಾಂಭದ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೊನೆಯ ಹಂತದ ರೋಗ ಲಕ್ಷಣದಲ್ಲಿ ಕೆಮ್ಮು ಮತ್ತು ಉಸಿರಾಟದ ತೊಂದರೆ ಎದುರಾಗುತ್ತದೆ.
ಇದೊಂದು ಹೊಸ ವೈರಸ್ ಇರಬಹುದಾ?
ಸಿಡಿಸಿ ಪ್ರಕಾರ ಹ್ಯಾಂಟಾ ವೈರಸ್ ರೋಗ ಅಮೆರಿಕದಲ್ಲಿ 1993ರಲ್ಲಿ ಪತ್ತೆಯಾಯಿತು. ವೈರಸ್ ಸ್ಪೋಟಗೊಂಡಂತಹ ಸಮಯದಲ್ಲಿ ನೈರುತ್ಯ ಯುಎಸ್ನ ನಾಲ್ಕು ಮೂಲೆಗಳಲ್ಲಿ ತೀವ್ರ ಉಸಿರಾಟದ ಕಾಯಿಲೆ ಕಾಣಿಸಿಕೊಂಡಿತು.ಆರಿಝೋನಾ, ನ್ಯೂ ಮೆಕ್ಸಿಕೋ, ಕೊಲೊರಾಡೋ ಮತ್ತು ಉತಾಹ್ ಪ್ರದೇಶದಲ್ಲಿ ಈ ರೋಗದ ವ್ಯಾಪಿಸಿತ್ತು. 1995ರಲ್ಲಿ ಇದು ರಾಷ್ಟ್ರೀಯವಾಗಿ ಸೂಚಿತ ರೋಗ ಎಂದು ಕರೆಯಲ್ಪಟ್ಟಿತು.
ಹ್ಯಾಂಟಾವೈರಸ್ನಿಂದ ಉಂಟಾಗುವ ರೋಗವು ಮಾರಕವೇ?
ಹೌದು. ಸಿಡಿಸಿ ಪ್ರಕಾರ ಹ್ಯಾಂಟಾವೈರಸ್ ಮರಣ ಪ್ರಮಾಣ ಶೇ. 38 ರಷ್ಟಿದೆ. ಸದ್ಯ ಹ್ಯಾಂಟಾ ವೈರಸ್ ಭೀತಿ ಕರೊನಾ ಬೆನ್ನಲ್ಲೇ ಚೀನಾಕ್ಕೆ ಆತಂಕ ತಂದೊಡ್ಡಿದೆ. ಕರೊನಾದಿಂದ ಚೀನಾದಲ್ಲಿ 3277 ಮಂದಿ ಸಾವಿಗೀಡಾಗಿದ್ದಾರೆ. ಕರೊನಾ ಹುಬೇ ಪ್ರಾಂತ್ಯದ ವುಹಾನ್ ನಗರದಲ್ಲಿ ಸ್ಪೋಟಗೊಂಡಿತು. (ಏಜೆನ್ಸೀಸ್)