ಕರೊನಾ ಆಯ್ತು ಈಗ ಹ್ಯಾಂಟ ವೈರಸ್​ ದಾಂಗುಡಿ; ಚೀನಾದಲ್ಲಿ ಓರ್ವ ವ್ಯಕ್ತಿ ಬಲಿ, ಸೋಂಕಿನ ಮೂಲ ದಂಶಕಗಳು...

Rat 24 march 20
Published on

ಕರೊನಾ ವೈರಸ್​ ಹುಟ್ಟಿಗೆ ಕಾರಣವಾಗಿದ್ದು ಚೀನಾ. ಅದರಲ್ಲೂ ಹುಬೈನ್ ವುಹಾನ್​ ಪ್ರಾಂತ್ಯ. ಇಡೀ ಜಗತ್ತಿಗೇ ವೈರಸ್​ ವ್ಯಾಪಿಸಿದೆ. ಲಕ್ಷಾಂತರ ಜನರಿಗೆ ಸೋಂಕು ತಗುಲಿದೆ. ಪ್ರತಿದಿನ ಅನೇಕರು ಕರೊನಾಕ್ಕೆ ಬಲಿಯಾಗುತ್ತಿದ್ದಾರೆ. 100ಕ್ಕೂ ಹೆಚ್ಚು ದೇಶಗಳು ಕರೋನಾ ವೈರಸ್​ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಸದ್ಯಕ್ಕಂತೂ ಕರೊನಾ ನಿಯಂತ್ರಣಕ್ಕೆ ಬರುವ ಲಕ್ಷಣಗಳಿಲ್ಲ.

ಹೀಗಿರುವಾಗ ಚೀನಾದಿಂದ ಇನ್ನೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮತ್ತೊಂದು ವೈರಸ್​ ಹುಟ್ಟಿಕೊಂಡಿದ್ದು, ಅದರ ಹೆಸರು ಹ್ಯಾಂಟ. ಚೀನಾದ ಯುನ್ನಾನ್​ ಪ್ರಾಂತ್ಯದ ವ್ಯಕ್ತಿಯೋರ್ವನಿಗೆ ಹ್ಯಾಂಟಾ ವೈರಸ್​ ತಗುಲಿ, ಆತ ಮೃತಪಟ್ಟಿದ್ದಾಗಿ ಅಲ್ಲಿನ ಪ್ರಮುಖ ಮಾಧ್ಯಮ ಗ್ಲೋಬಲ್​ ಟೈಮ್ಸ್​ ವರದಿ ಮಾಡಿದೆ.

ಜಗತ್ತಿನ ಗಮನವೆಲ್ಲ ಕರೊನಾ ವೈರಸ್​ ಮೇಲೆಯೇ ಇರವಾಗ ಹೀಗೆ ಸದ್ದಿಲ್ಲದೆ ಮತ್ತೊಂದು ಮಾರಕ ವೈರಸ್​​ ದಾಂಗುಡಿ ಇಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಗ್ಲೋಬಲ್​ ಟೈಮ್​ ವರದಿಯಾಗುತ್ತಲೇ ಹ್ಯಾಂಟಾ ವೈರಸ್​ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಸೃಷ್ಟಿಯಾಗಿದೆ.

ಹ್ಯಾಂಟ ವೈರಸ್​ ಇದೇ ಮೊದಲಿನದಲ್ಲ. ಆದರೆ ಕರೊನಾ ಭಯದ ನಡುವೆ ಇದೊಂದು ಶುರುವಾಗಿ, ವ್ಯಕ್ತಿ ಮೃತಪಟ್ಟಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಸತ್ತ ವ್ಯಕ್ತಿಯೊಂದಿಗೆ ಬಸ್​ನಲ್ಲಿ ಪ್ರಯಾಣ ಮಾಡಿದ್ದಾರೆ ಎನ್ನಲಾದ 32 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಹ್ಯಾಂಟ ವೈರಸ್​ ಗಾಳಿಯಿಂದ ಹರಡುವುದಿಲ್ಲ ಮತ್ತು ಕರೊನಾ ವೈರಸ್​ಗಿಂತಲೂ ಭಿನ್ನ. ದಂಶಕಗಳ ಪ್ರಭೇದಕ್ಕೆ ಸೇರಿದ ಇಲಿಗಳು, ಅಳಿಲುಗಳಂತಹ ಜೀವಿಗಳಿಂದ ಬರುವ ವೈರಸ್​ ಆಗಿದೆ. ಜಗತ್ತಿನಾದ್ಯಂತ ಪಸರಿಸಿ, ಹಲವು ರೋಗ ಲಕ್ಷಣಗಳಿಗೆ ಕಾರಣವಾಗಬಹುದು ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ತಿಳಿಸಿದೆ.

ಮನೆಯಲ್ಲಿ ಈ ದಂಶಕ ಪ್ರಭೇದ ಪ್ರಾಣಿಗಳನ್ನು ಸಾಕಿದ್ದರೆ ಅಥವಾ ಮನೆಯ ಹೊರಗಡೆ ಅವುಗಳ ಸಂಖ್ಯೆ ಹೆಚ್ಚಿದ್ದರೆ ಹ್ಯಾಂಟ ವೈರಸ್​ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ವೈರಸ್​ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಆದರೆ ಇಲಿ, ಅಳಿಲು, ಮೊಲಗಳಂತಹ ದಂಶಕಗಳ ಹಿಕ್ಕೆಗಳು, ಮೂತ್ರ, ಗೂಡು, ಅವುಗಳ ಬಾಯಿಯ ದ್ರವಗಳು ನಮ್ಮ ಕೈಗೆ ತಗುಲಿ, ಅದೇ ಕೈಯಲ್ಲಿ ನಾವು ಮೂಗು, ಕಣ್ಣು, ಬಾಯಿಗಳನ್ನು ಮುಟ್ಟಿಕೊಂಡರೆ ವೈರಸ್​ ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಾಗೇ ಓರ್ವನ ಕೈಯಿಗೆ ಇಂತಹ ತ್ಯಾಜ್ಯಗಳು ತಗುಲಿದ್ದು, ಅವನು ಅದೇ ಕೈಯಲ್ಲಿ ಇನ್ನಿತರರನ್ನು ಮುಟ್ಟಿದರೆ ಅವರಿಗೂ ತಗುಲಬಹುದು. ದಂಶಕಗಳು ಕಚ್ಚಿದರೂ ವೈರಸ್​ ತಗುಲಬಹುದು. ಆದರೆ ಸಾಧ್ಯತೆ ತೀರ ಕಡಿಮೆ ಎಂದು ಸಿಡಿಸಿ ಮಾಹಿತಿ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net