ನವದೆಹಲಿ: ನಿಷೇಧಿತ ಮಾದಕ ವಸ್ತುಗಳು ಮತ್ತು ನಿರ್ಬಂಧಿತ ಮಾದಕ ದ್ರವ್ಯಗಳ ಆಮದಿಗೆ ಸಂಬಂಧಿಸಿದಂತೆ ಕತಾರ್ ದೇಶದ ಕಾನೂನುಗಳ ಬಗ್ಗೆ ಸೆಪ್ಟೆಂಬರ್ 10ರಂದು ವಿಚಾರ ಸಂಕಿರಣ ಏರ್ಪಡಿಸಲಾಯಿತು.
ಕಾನೂನು ನಿಯಮಗಳ ಬಗ್ಗೆ ಅರಿವು ಮೂಡಿಸಲು ಭಾರತೀಯ ರಾಯಭಾರ ಕಚೇರಿ ಮತ್ತು ಭಾರತೀಯ ಸಮುದಾಯದವರ ಸಂಸ್ಥೆಯಾದ ಇಂಡಿಯನ್ ಕಮ್ಯುನಿಟಿ ಬೆನವಲೆಂಟ್ ಫೋರಂ (ಐಸಿಬಿಎಫ್) ಆನ್‌ಲೈನ್ ಸಂಕಿರಣವನ್ನು ಆಯೋಜಿಸಿತ್ತು.
ಭಾರತೀಯ ಸಮುದಾಯದ ಸದಸ್ಯರು, ನಾಯಕರು, ಮಾಧ್ಯಮ ಪ್ರತಿನಿಧಿಗಳು ಮತ್ತು ದೋಹಾ ಹಾಗೂ ಭಾರತದ ಸಂಬಂಧಪಟ್ಟ ಕ್ಷೇತ್ರದ ಪ್ರತಿನಿಧಿಗಳು ಸಂಕಿರಣದಲ್ಲಿ ಭಾಗವಹಿಸಿದ್ದರು.
ಕತಾರ್‌ನ ಕಾನೂನು ನಿಯಮಗಳನ್ನು ತಿಳಿದುಕೊಂಡು ಅವುಗಳನ್ನು ಪಾಲಿಸುವಂತೆ ಕತಾರ್‌ನಲ್ಲಿನ ಭಾರತದ ರಾಯಭಾರಿ ವಿಪುಲ್, ಭಾರತೀಯರಿಗೆ ಕರೆ ನೀಡಿದರು. ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ ಐಶ್ ಸಿಂಘಾಲ್ ಮತ್ತು ಐಸಿಬಿಎಫ್ ಅಧ್ಯಕ್ಷ ಶ್ರೀನಿವಾಸ ಬಾವ ಕೂಡ ಮಾತನಾಡಿದರು.
ಭಾರತೀಯರಿಗೆ ಶಿಕ್ಷೆ: ಮಾದಕದ್ರವ್ಯಗಳು ಅಥವಾ ನಿಷೇಧಿತ ಡ್ರಗ್ಸ್‌ಗಳನ್ನು ಸಾಗಿಸಿದ್ದಕ್ಕಾಗಿ ಭಾರತೀಯರಿಗೆ ಶಿಕ್ಷೆಯಾದ ಕೆಲವು ಪ್ರಕರಣಗಳ ಕೇಸ್ ಸ್ಟಡಿಗಳನ್ನು ಸಿಂಘಾಲ್ ಮಂಡಿಸಿದರು. ಭಾರತೀಯ ರಾಯಭಾರ ಕಚೇರಿಯ ಕಾರ್ಮಿಕ ಅಧಿಕಾರಿ ಜಯ ಗಣೇಶ್, ಐಸಿಬಿಎಫ್ ಉಪಾಧ್ಯಕ್ಷ ದೀಪಕ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವರ್ಕೆ ಬೊಬಾನ್ ಮತ್ತು ಜೈಲು ಭೇಟಿಯ ಮುಖ್ಯಸ್ಥರಾದ ಝರೀನಾ ಅಹದ್ ಮೊದಲಾದವರು ಸಂಕಿರಣವನ್ನು ಯಶಸ್ವಿಯಾಗಿ ಸಂಘಟಿಸುವಲ್ಲಿ ನೆರವಾದರು.