ನ್ಯೂಸ್

'ಮೋದಿ ಸಂದೇಶ್' ಬೇಕೋ ? 'ದೀದಿ ಸಂದೇಶ್' ಬೇಕೋ ? ....ಕೇಳುತ್ತಿವೆ ಬಂಗಾಳದ ಸಿಹಿಮಳಿಗೆಗಳು!

ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮಾರ್ಚ್​ 27 ಕ್ಕೆ ಆರಂಭವಾಗುವ ವಿಧಾನಸಭಾ ಚುನಾವಣೆಯ ಸಂಘರ್ಷವು ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ನಡುವೆ ಭಾರೀ ಅಬ್ಬರದಿಂದ ನಡೆಯುತ್ತಿದೆ. ಎರಡೂ ಪಕ್ಷಗಳ ರಾಜಕೀಯ ನಾಯಕರು ಪರಸ್ಪರ ಆರೋಪ - ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡು ರಾಜ್ಯದಲ್ಲೆಲ್ಲಾ ಗದ್ದಲ ಸೃಷ್ಟಿಸುತ್ತಿದ್ದಾರೆ. ಈ ನಡುವೆ ರಾಜಕೀಯ ಕಾಳಗದ ಕಹಿ ಸಾರವನ್ನು ಸಿಹಿತಿನಿಸುಗಳಲ್ಲಿ ಹಿಡಿದಿಡುವ ಪ್ರಯತ್ನ ಸಾಗಿದೆ.

ಟಿಎಂಸಿಯ ಹಲವಾರು ನಾಯಕರು ಬಿಜೆಪಿ ಸೇರಿಕೊಂಡ ಹಿನ್ನೆಲೆಯಲ್ಲಿ 'ಆಟ ಶುರುವಾಗಿದೆ' ಎಂಬ ಅರ್ಥವನ್ನು ಕೊಡುವ ‘ಖೇಲಾ ಹೋಬೆ’ ಎನ್ನುವ ಬಂಗಾಳಿ ಘೋಷವಾಕ್ಯವನ್ನು ಮಮತಾ ಬ್ಯಾನರ್ಜಿ ಆರಂಭಿಸಿದರು. ಅತ್ತ ಬಿಜೆಪಿ 'ಜೈ ಶ್ರೀರಾಮ್' ಘೋಷಣೆಯನ್ನು ತನ್ನ ಚುನಾವಣಾ ಮಂತ್ರವಾಗಿಸಿಕೊಂಡಿತು. ಇದೀಗ ಈ 'ಖೇಲಾ ಹೋಬೆ' ವಿರ್ಸಸ್ 'ಜೈ ಶ್ರೀರಾಮ್​' ಕಾಳಗಕ್ಕೆ ಒಂದು ರುಚಿಯಾದ ಟ್ವಿಸ್ಟ್​ ಸಿಕ್ಕಿದೆ.

ಬಂಗಾಳದಲ್ಲಿ ಸಿಹಿತಿನಿಸುಗಳ ಮಳಿಗೆಗಳ ಸರಣಿಯನ್ನು ಹೊಂದಿರುವ ಪ್ರಸಿದ್ಧ "ಬಾಲಾರಾಮ್ ಮಲ್ಲಿಕ್ ರಾಧಾರಮಣ್ ಮಲ್ಲಿಕ್ ಸ್ವೀಟ್ ಶಾಪ್​"ನವರು ಹೊಸ ಮಾದರಿಯ 'ಸಂದೇಶ್'​ಗಳನ್ನು ಲಾಂಚ್ ಮಾಡಿದ್ದಾರೆ. ಬಂಗಾಳದ ಜನರಿಗೆ ಬಹುಪ್ರಿಯವಾದ ಸಂದೇಶ್​ಗಳ ಮೇಲೆ ಈ ಎರಡು ಪಕ್ಷಗಳ ಘೋಷವಾಕ್ಯಗಳನ್ನು ಮುದ್ರಿಸಿದ್ದಾರೆ. 'ಖೇಲಾ ಹೋಬೆ' ಎಂದು ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ ಬರೆದಿರುವ ಸಂದೇಶ್​ಗಳನ್ನೂ, 'ಜೈ ಶ್ರೀರಾಮ್​' ಎಂದು ಬಿಳಿ ಮತ್ತು ಕೇಸರಿ ಬಣ್ಣಗಳಲ್ಲಿ ಬರೆದಿರುವ ಸಂದೇಶ್​ಗಳನ್ನೂ ಅವರು ಮಾರಾಟಕ್ಕೆ ಸಜ್ಜುಗೊಳಿಸಿದ್ದಾರೆ.

"ತಮಗೆ ಒಪ್ಪಿಗೆಯಾಗುವ ಘೋಷವಾಕ್ಯಗಳಿರುವ ಮೆದುವಾದ ಸಂದೇಶ್​ಗಳನ್ನು ಆಯಾ ರಾಜಕೀಯ ಪಕ್ಷದ ನಾಯಕರು, ಅಭಿಮಾನಿಗಳು ಖರೀದಿಸುತ್ತಿದ್ದಾರೆ" ಎಂದು ಮಳಿಗೆಗಳ ಮಾಲೀಕ ಸುದೀಪ್ ಮಲ್ಲಿಕ್ ಹೇಳಿದ್ದಾರೆ. ನಾಯಕರ ಚಿತ್ರಗಳಿರುವ 'ಮೋದಿ ಸಂದೇಶ್' ಮತ್ತು 'ದೀದಿ ಸಂದೇಶ್' ಕೂಡ ತಯಾರಾಗಿವೆ. ಜೊತೆಗೆ ಬೇರೆ ಬೇರೆ 'ಮಿಶ್ಟಿ'(ಸಿಹಿತಿಂಡಿ)ಗಳನ್ನು ಬಿಜೆಪಿ, ಟಿಎಂಸಿ, ಕಾಂಗ್ರೆಸ್ ಮತ್ತು ಕಮುನಿಸ್ಟ್ ಪಕ್ಷಗಳ ಚಿಹ್ನೆಗಳೊಂದಿಗೆ ತಯಾರಿಸಲಾಗುತ್ತಿದೆ. "ಈ ರೀತಿಯ ಸಿಹಿಗಳಿಗೆ ಚುನಾವಣೆ ಸಮಯದಲ್ಲಿ ಭಾರೀ ಬೇಡಿಕೆ ಬರುತ್ತದೆ" ಎಂದು ಮಲ್ಲಿಕ್ ಹೇಳಿದ್ದಾರೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ