ನ್ಯೂಸ್

ಗಂಡನಿಂದ ಹಿಂಸೆ, ಇಬ್ಬರು ಮಕ್ಕಳ ಜವಾಬ್ದಾರಿ; ಬೀದಿ ಬೀದಿಗಳಲ್ಲಿ ಕಸ ಗುಡಿಸುತ್ತಿದ್ದ ಮಹಿಳೆ ಇಂದು ಉನ್ನತ ಅಧಿಕಾರಿ!

ಹೊಸದಿಲ್ಲಿ: ಇಂದಿನ ಸಮಾಜದಲ್ಲಿ ಅನೇಕ ಮಹಿಳೆಯರು ತಾವು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಸಂಸಾರದಲ್ಲಿ ಆಗುವ ಕಿತ್ತಾಟ, ಮನಸ್ತಾಪ, ಅತೀವ ಬೇಸರಗಳಿಂದ ದೂರ ಉಳಿಯುವುದರ ಬಗ್ಗೆ ನಾವೆಲ್ಲಾ ಅರಿತಿದ್ದೇವೆ. ಕೆಲವರು ಗಟ್ಟಿ ಮನಸ್ಸಿನಿಂದ ಹೋರಾಡಿ, ಅದನ್ನು ಸರಿಪಡಿಸಿಕೊಳ್ಳಲು ಯತ್ನಿಸುತ್ತಾರೆ. ಇನ್ನು ಕೆಲವರು ಇದನ್ನೆಲ್ಲಾ ಭೇದಿಸದೆ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಆದ್ರೆ, ಇಲ್ಲೊಬ್ಬ ಮಹಿಳೆ ಮದುವೆಯಾದ ಐದು ವರ್ಷಗಳಿಂದ ಪತಿಯಿಂದ ನಿರಂತರ ಹಿಂಸೆ ಅನುಭವಿಸಿ, ಕಡೆಗೂ ಅದರಿಂದ ಹೊರಬಂದು, ಇಂದು ಡೆಪ್ಯೂಟಿ ಕಲೆಕ್ಟರ್​ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರೇ ನಿಜಕ್ಕೂ ಆಶ್ಚರ್ಯದ ಜತೆಗೆ ಸ್ಪೂರ್ತಿ ಕೂಡ ಹೌದು.

ಮದುವೆಯಾದ ಬಳಿಕ ಗಂಡನೊಂದಿಗೆ ಖುಷಿಯಾಗಿ ಇರುತ್ತೇನೆ ಎಂದು ಭಾವಿಸಿದ್ದ ಈ ಮಹಿಳೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೆಲವು ವರ್ಷಗಳು ಉರುಳಿದರೂ ಖುಷಿಯನ್ನು ಕಾಣಲಿಲ್ಲ. ಎರಡು ಮಕ್ಕಳಿಗೆ ಜನ್ಮ ನೀಡಿದರೂ ಪತಿಯಿಂದ ಹಿಂಸೆ ತಪ್ಪಲಿಲ್ಲ. ನಿರಂತರ ಜಗ್ಗಾಟಗಳಿಂದ ಬೇಸತ್ತಿದ್ದ ಇವರನ್ನು ಪತಿ ಮನೆಯಿಂದ ಹೊರಹಾಕಿದರು. ಇಷ್ಟೆಲ್ಲಾ ಆದ್ರೂ ಧೃತಿಗೆಡದ ಮಹಿಳೆ, ಗಂಡನಿಂದ ದೂರ ಉಳಿದು ತನ್ನ ಮಕ್ಕಳೊಂದಿಗೆ ಬೇರೆಡೆ ವಾಸಿಸಲು ಪ್ರಾರಂಭಿಸಿದರು.

ಕಷ್ಟಗಳ ಸರಮಾಲೆಯನ್ನು ಹೊತ್ತ ಇವರು, ಇಬ್ಬರು ಮಕ್ಕಳನ್ನು ಓದಿಸಿಕೊಂಡು ಬೆಳಗಿನ ಸಮಯದಲ್ಲಿ ಬೀದಿ ಬೀದಿಗಳಲ್ಲಿ ಕಸ ಗುಡಿಸುವ ಮೂಲಕ ದಿನಗೂಲಿ ಪಡೆದು, ತದನಂತರ ರಾತ್ರಿ ವೇಳೆ ತಮ್ಮ ಆಸೆಯಂತೆ ಓದಲು ಆರಂಭಿಸಿದರು. ದಿನವಿಡಿ ಇದನ್ನೇ ತಮ್ಮ ದಿನಚರಿ ಮಾಡಿಕೊಂಡು, ನಿರಂತರವಾಗಿ ಶ್ರಮಿಸಿ, ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಇಂದು ಅದೇ ಊರಿನಲ್ಲಿ ಡೆಪ್ಯೂಟಿ ಕೆಲೆಕ್ಟರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಷ್ಟಗಳನೆಲ್ಲಾ ಬೇಧಿಸಿ ಇಂದು ಉನ್ನತ ಅಧಿಕಾರಿಯಾಗಿರುವ ಮಹಿಳೆಯ ಹೆಸರು ಆಶಾ ಕಂಡಾರ. ಮೊದ ಮೊದಲು ಜೋಧಪುರ್​ನ ನಗರ ಪಾಲಿಕೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದ ಇವರು, ತದನಂತರ ನಿರಂತರವಾಗಿ ಶ್ರಮಿಸಿ, ಪರೀಕ್ಷೆ ಬರೆದು, ತಾವು ಕಂಡ ಕನಸ್ಸನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಡನಿಂದ ದೂರಾದ ಬಳಿಕ ಪದವಿ ಮುಗಿಸಿಕೊಂಡ ಆಶಾ, ನಂತರದಲ್ಲಿ ಆರ್​ಎಎಸ್ (RAS)​ ಪರೀಕ್ಷೆಗಾಗಿ ಹಗಲಿನಲ್ಲಿ ಕೆಲಸ ನಿರ್ವಹಿಸಿ, ರಾತ್ರಿ ವೇಳೆ ಓದಿಕೊಂಡು ಈ ಎಕ್ಸಾಂ ಪಾಸ್​ ಮಾಡಿದ್ದಾರೆ. ತನ್ನಿಬ್ಬರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಪಣತೊಟ್ಟ ಆಶಾ, ಇಂದು ಅವರ ಭವಿಷ್ಯಕ್ಕೆ ಬೆಳಕಾಗಿದ್ದಾರೆ. ಅವರ ಬದುಕು ನಿಜಕ್ಕೂ ಇಂದು ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದೆ ಎಂದರೆ ತಪ್ಪಾಗಲಾರದು,(ಏಜೆನ್ಸೀಸ್).