ನವದೆಹಲಿ: ಕೇಂದ್ರ ಸರ್ಕಾರದ ಪ್ರಸಕ್ತ ವರ್ಷದ (2023) ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ವರದಿ ಹೊರಬಿದ್ದಿದ್ದು, ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಈ ಬಾರಿಯೂ ಮಧ್ಯಪ್ರದೇಶದ ಇಂದೋರ್ ಮತ್ತು ಸೂರತ್ ಪಾಲಾಗಿದೆ. ಈ ಮೂಲಕ ಇಂದೋರ್ ಸತತ 7ನೇ ಬಾರಿಗೆ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ.
ಭಾರತದ ಟಾಪ್ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಸ್ಥಾನ ಪಡೆದಿಲ್ಲ. 2022ರಲ್ಲಿ ಮೈಸೂರು ಎಂಟನೇ ಸ್ಥಾನ ಪಡೆದಿತ್ತು. 2020ರಲ್ಲಿ ಮೈಸೂರು 5ನೇ ಸ್ಥಾನದಲ್ಲಿ ಇದ್ದಿದ್ದು, ಈಗ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ.
ಕಳೆದ ವರ್ಷದ ಪ್ರಶಸ್ತಿಗಳಲ್ಲಿ ಮೂರನೇ ಸ್ಥಾನ ಪಡೆದಿದ್ದ ನವಿ ಮುಂಬೈ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರ ಕೇಂದ್ರಗಳಿಗೆ ಮಹಾರಾಷ್ಟ್ರದ ಸಾಸ್ವಾದ್ ಸ್ವಚ್ಛ ನಗರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಛತ್ತೀಸ್‌ಗಢದ ಪಟಾನ್ ಮತ್ತು ಮಹಾರಾಷ್ಟ್ರದ ಲೋನಾವ್ಲಾ ಈ ವಿಭಾಗದಲ್ಲಿ ಎರಡನೇ ಮತ್ತು ಮೂರನೇ ಸ್ವಚ್ಛ ನಗರಗಳಾಗಿವೆ. ವಾರಣಾಸಿ ಮತ್ತು ಪ್ರಯಾಗ್‌ರಾಜ್‌ಗಳು ಸ್ವಚ್ಛವಾದ ಗಂಗಾ ಪಟ್ಟಣಗಳೆಂದು ಗುರುತಿಸಲ್ಪಟ್ಟಿವೆ. ಭೂಪಲ್ (5) ವಿಜಯವಾಡ (6) ಎನ್ಡಿಎಂಸಿ (7) ತಿರುಪತಿ (8) ಗ್ರೇಟರ್ ಹೈದರಾಬಾದ್ (9) ಪುಣೆ (10) ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ವಾರ್ಷಿಕ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ವರದಿ ಪಟ್ಟಿಯನ್ನು ಗುರುವಾರ (ಇಂದು) ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಡುಗಡೆ ಮಾಡಿದ್ದು. ವಿಜೇತ ನಗರಗಳ ಆಡಳಿತಗಳಿಗೆ ಪ್ರಶಸ್ತಿಯನ್ನೂ ನೀಡಿದ್ದಾರೆ. ಈ ಸಮೀಕ್ಷೆ ವಿವಿಧ ಹಂತಗಳಲ್ಲಿ ನಡೆಯಲಿದೆ. 1 ಲಕ್ಷದಿಂದ 3 ಲಕ್ಷದವರೆಗಿನ ಜನಸಂಖ್ಯೆ ಇರುವ ನಗರಗಳು, 3 ಲಕ್ಷ ಮೇಲ್ಪಟ್ಟು, 10 ಲಕ್ಷದ ಕೆಳಗೆ ಜನಸಂಖ್ಯೆ ಇರುವ ನಗರಗಳು ಮತ್ತು 10 ಲಕ್ಷಕ್ಕೂ ಮೇಲ್ಪಟ್ಟು ಜನರು ಇರುವ ನಗರಗಳು ಎಂಬ ಮೂರು ವಿಭಾಗದಲ್ಲಿ ಸಮೀಕ್ಷೆ ನಡೆಯುತ್ತದೆ.
2014ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸ್ವಚ್ಛ ಭಾರತ್ ಅಭಿಯಾನ ಪ್ರಾರಂಭ ಮಾಡಿತು. ಅದರ ಒಂದು ಭಾಗವಾಗಿ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯೂ ಶುರುವಾಯಿತು. ದೇಶಾದ್ಯಂತ ಹಳ್ಳಿಗಳು, ನಗರಗಳು, ಪಟ್ಟಣಗಳು, ಪ್ರದೇಶಗಳ ಸ್ವಚ್ಛತೆಯನ್ನು ಸ್ಥಳೀಯ ಆಡಳಿತಗಳು ಎಷ್ಟರ ಮಟ್ಟಿಗೆ ಕಾಪಾಡಿಕೊಂಡಿವೆ ಎಂಬುದನ್ನು ಸಮೀಕ್ಷೆ ಮಾಡಲಾಗುತ್ತದೆ. ಇದು ಜನರನ್ನು ಮತ್ತು ಆಡಳಿತಗಳನ್ನು ಸ್ವಚ್ಛತೆಯೆಡೆಗೆ ಪ್ರೇರೇಪಿಸುವ ಸಮೀಕ್ಷೆಯೂ ಹೌದು.