More

    ಮೆಟ್ರೋದಲ್ಲಿ ರೀಲ್ಸ್​ ಹುಚ್ಚಾಟ… ಜನರ ಪೇಚಾಟ; ನಿಯಮ ಉಲ್ಲಂಘಿಸುವವರಿಗೆ ಬೇಕು ಶಾಸ್ತಿ

    ರಾಮ ಕಿಶನ್​ ಕೆ.ವಿ. ಬೆಂಗಳೂರು
    ನಮ್ಮ ಮೆಟ್ರೋ ಪ್ರಯಾಣದ ವೇಳೆ ಹಾಗೂ ನಿಲ್ದಾಣಗಳಲ್ಲಿ ಬೇಕಾಬಿಟ್ಟಿಯಾಗಿ ರೀಲ್ಸ್​ ಮಾಡುತ್ತ, ಪ್ರಶ್ನಿಸಿದರೆ ಅನುಚಿತವಾಗಿ ವರ್ತಿಸುವ ರೀಲ್ಸ್​ ಸ್ಟಾರ್​ಗಳ ಉಪಟಳ ಹೆಚ್ಚಾಗಿದೆ. ಇದರಿಂದ ಹಲವು ಪ್ರಯಾಣಿಕರು ಮುಜುಗರಕ್ಕೆ ಒಳಗಾಗುತ್ತಿರುವ ಪ್ರಕರಣಗಳೂ ನಡೆಯುತ್ತಿವೆ.

    ‘ರೀಲ್ಸ್​ ಸ್ಟಾರ್​’ಗಳು ಎಂದು ಹಣೆಪಟ್ಟಿ ಕಟ್ಟಿಕೊಂಡ ಕೆಲವರು, ಸಾರ್ವಜನಿಕ ಸ್ಥಳಗಳಲ್ಲಿ ಹುಚ್ಚಾಟ ಮೆರೆಯುತ್ತಿದ್ದಾರೆ. ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯಬೇಕು, ಹಿಂಬಾಲಕರ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮೆಟ್ರೋ ರೈಲೊಳಗೆ ಏಕಾಏಕಿ ನೃತ್ಯಮಾಡಿ, ಕಿರುಚಿ ಸಹಪ್ರಯಾಣಿಕರು ಗಾಬರಿಯಾಗುವಂತೆ ಮಾಡಿ ಆ ದೃಶ್ಯವನ್ನು ಸೆರೆಹಿಡಿದು, ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುತ್ತಿದ್ದಾರೆ.

    ಮೆಟ್ರೋ ರೈಲಿನಲ್ಲಿ ಅಥವಾ ನಿಲ್ದಾಣದಲ್ಲಿ ಯಾರಾದರೂ ಬೇಜವಾಬ್ದಾರಿಯಾಗಿ ವರ್ತಿಸುತ್ತಿರುವುದು ಕಂಡು ಬಂದರೆ, ಅಂತಹವರ ವಿರುದ್ಧ ಭದ್ರತಾ ಸಿಬ್ಬಂದಿ ದಂಡ ವಿಧಿಸುತ್ತಾರೆ. ಒಂದು ವೇಳೆ ಪ್ರಕರಣ ಗಂಭೀರ ಸ್ವರೂಪದಲ್ಲಿದ್ದರೆ, ಕಾನೂನು ಕ್ರಮ ಜರುಗಿಸಲು ಬಿಎಂಆರ್​ಸಿಎಲ್​ ವತಿಯಿಂದ ಪೊಲೀಸ್​ ದೂರು ನೀಡಲಾಗುತ್ತದೆ. ಯಾರಾದರೂ ಅನುಚಿತವಾಗಿ ವರ್ತಿಸುವುದು ಕಂಡುಬಂದಲ್ಲಿ, ಪ್ರಯಾಣಿಕರು ಕೂಡಲೇ ಮೆಟ್ರೋ ಸಿಬ್ಬಂದಿಗೆ ಮಾಹಿತಿ ನೀಡಬಹುದು. ಕಳೆದ ಒಂದು ವರ್ಷದ ಅವಧಿಯಲ್ಲಿ 500ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.

    ಕಳೆದ ಜೂನ್​ನಲ್ಲಿ ಯೂಟ್ಯೂಬರ್​ ಒಬ್ಬ ವಿಜಯನಗರದಿಂದ ಮೆಜೆಸ್ಟಿಕ್​ ನಿಲ್ದಾಣಕ್ಕೆ ಬರುತ್ತಿದ್ದಾಗ ರೈಲಿನಲ್ಲಿ ಮೂರ್ಛೆ ಹೋದವನಂತೆ ನಟಿಸಿ, ಅಲ್ಲಿದ್ದ ಪ್ರಯಾಣಿಕರನ್ನು ಒಂದು ಕ್ಷಣ ಬೆಚ್ಚೀಬಿಳಿಸಿದ್ದ. ಬಳಿಕ ಆ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದ. ಕಳೆದ ಅಕ್ಟೋಬರ್​ನಲ್ಲಿ ಮೂವರು ವಿದ್ಯಾರ್ಥಿಗಳು ರಾತ್ರಿ ರೈಲೊಳಗಿನ ಸರಳುಗಳನ್ನು ಹಿಡಿದುಕೊಂಡು ರೋಲಿಂಗ್​ ವ್ಯಾಯಾಮ ಮಾಡಿದ್ದರು. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ತಪ್ಪಿತಸ್ಥರಿಗೆ ಮೆಟ್ರೋ ಸಿಬ್ಬಂದಿ ದಂಡ ವಿಧಿಸಿದ್ದರು.

    ನಿಯಮ ಉಲ್ಲಂಘನೆ

    ಮೆಟ್ರೋ ನಿಲ್ದಾಣದಲ್ಲಿ ಫೋಟೋ, ವಿಡಿಯೋ ಚಿತ್ರೀಕರಿಸಬಾರದು ಎಂಬ ನಿಯಮವಿದ್ದಾಗ್ಯೂ ಸಾಕಷ್ಟು ಮಂದಿ ರೀಲ್ಸ್​ ಮಾಡಿರುವುದನ್ನು ಜಾಲತಾಣಗಳಲ್ಲಿ ಕಾಣಬಹುದು. ನಿಮ್ಮಿಂದ ಬೇರೆಯವರು ಸಮಸ್ಯೆ ಅನುಭವಿಸುವಂತಾಗಬಾರದು ಎನ್ನುತ್ತಾರೆ ಮೆಟ್ರೋ ಪ್ರಯಾಣಿಕರು.

    ರೀಲ್ಸ್​ಸ್ಟಾರ್​ ಮೇಲೆ ಪ್ರಕರಣ ದಾಖಲು

    ಬಂಡೇಪಾಳ್ಯದ ಗೆದ್ದನಹಳ್ಳಿ ನಿವಾಸಿ ಸಂತೋಷ್​ಕುಮಾರ್​ ಎಂಬಾತ ಡಿ.24ರಂದು ಮೆಟ್ರೋ ರೈಲಿನ ಒಳಗೆ ಏಕಾಏಕಿ ಕಿರುಚುತ್ತ ಸಹ ಪ್ರಯಾಣಿಕರು ಗಾಬರಿಗೊಳ್ಳುವಂತೆ ಮಾಡಿ, ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ. ಇದನ್ನು ಗಮನಿಸಿದ್ದ ಬಿಎಂಆರ್​ಸಿಎಲ್​ ಅಧಿಕಾರಿಗಳು, ಈತನ ಮೇಲೆ ಕಣ್ಣಿಟ್ಟಿದ್ದರು. ಕೊನೆಗೂ ಯುವಕನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿ, ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ, ಮೆಟ್ರೋ ಅಧಿಕಾರಿಗಳು 500 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

    ನಮ್ಮ ಮೆಟ್ರೋದಲ್ಲಿ ನಿತ್ಯ ಲಾಂತರ ಜನರು ಸಂಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲವರು ಮನ ಬಂದಂತೆ ಪ್ರ್ಯಾಂಕ್​ ರೀಲ್ಸ್​ ಮಾಡುವುದು, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಟನೆಗಳು ನಡೆಯುತ್ತಿವೆ. ಇಂಥವರ ವಿರುದ್ಧ ಬಿಎಂಆರ್​ಸಿಎಲ್​ ಸೂಕ್ತ ಕ್ರಮ ಕೈಗೊಳ್ಳಬೇಕು.
    -ಪವನ್​ ಹಾರಾಡಿ, ಐಟಿ ಉದ್ಯೋಗಿ

    ಮೆಟ್ರೋ ಜನಸ್ನೇಹಿ ವ್ಯವಸ್ಥೆಯಾಗಿದೆ. ಪ್ರಯಾಣಿಕರಿಗೆ ಏನೇ ತೊಂದರೆಯಾದರೂ ಸಮಸ್ಯೆ ಬಗೆಹರಿಸಲಾಗುತ್ತದೆ. ಈ ಹಿಂದೆ ಮೆಟ್ರೋದಲ್ಲಿ ರೀಲ್ಸ್​ ಮಾಡುತ್ತ ತೊಂದರೆ ಕೊಟ್ಟವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಇಂತಹ ಪ್ರಕರಣಗಳು ನಡೆದಲ್ಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.
    – ಬಿಎಂಆರ್​ಸಿಎಲ್​ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts