ನ್ಯೂಸ್

ಸೂತ್ರನೇತಿ ಮೂಗಿನ ಹೊಳ್ಳೆಗಳ ಶುದ್ಧೀಕರಣ, ಕ್ಷಮತೆ ಹೆಚ್ಚಿಸುವ ರೀತಿ

ಸೂತ್ರದ ಅಥವಾ ವಿಶೇಷವಾಗಿ ಹತ್ತಿಯಿಂದ ತಯಾರಿಸಿದ ದಾರದ ಮೂಲಕ ಮೂಗಿನ ಹೊಳ್ಳೆಗಳ ಶುದ್ಧೀಕರಣವೇ ‘ಸೂತ್ರನೇತಿ’. ಮೊದಲೆಲ್ಲ ಇದಕ್ಕಾಗಿ ದಾರದ ಅನೇಕ ಎಳೆಗಳನ್ನು ಒಟ್ಟಾಗಿ ಬಿಗಿಯಾಗಿ ಸುತ್ತಿ, ಜೇನುಮೇಣದಲ್ಲಿ ಮುಳುಗಿಸಲಾಗುತ್ತಿತ್ತು. ಈ ದಾರದ ಉದ್ದ ಸುಮಾರು 36ರಿಂದ 45 ಸೆಂ.ಮೀ. ಮತ್ತು ಅಗಲ ಸುಮಾರು 4 ಮಿ.ಮೀ ಇರುತ್ತಿತ್ತು. ಆದರೆ ಈಗ ತೆಳುವಾದ ರಬ್ಬರ್ ಕೆಥೆಟರ್ ಸಂಖ್ಯೆ 3,4 ಅಥವಾ 5 ಗಾತ್ರದ ನಳಿಕೆ ಬಳಸಲಾಗುತ್ತಿದೆ.

ಅಭ್ಯಾಸ ಕ್ರಮ:

  • ಹಿತವೆನಿಸುವ ಭಂಗಿಯಲ್ಲಿ ನಿಲಿ ್ಲಥವಾ ಕುಳಿತುಕೊಳ್ಳಿ.
  • ತಲೆಯನ್ನು ಸ್ವಲ್ಪ ಹಿಂದಕ್ಕೆ ವಾಲಿಸಿ. ಕೆಥೆಟರ್ ಅಥವಾ ಮೇಣಲೇಪಿತ ಹತ್ತಿಯ ದಾರದ ತುದಿಯನ್ನು ಒಂದು ಮೂಗಿನ ಹೊಳ್ಳೆಗೆ ನಿಧಾನವಾಗಿ ಮೃದುವಾಗಿ ತೂರಿಸಿ.
  • ಸೂತ್ರದ ತುದಿಯನ್ನು ಯಾವಾಗಲೂ ಕೆಳ ಮುಖವಾಗಿ ಅಂದರೆ ಮೂಗಿನ ಕೆಳಗಿರುವಂತೆ ಇಡಿ. ನೇರವಾಗಿ ಮೇಲಕ್ಕೆ ನುಗ್ಗಿಸಬೇಡಿ.
  • ದಾರವು ಗಂಟಲಿನ ಹಿಂಭಾಗವನ್ನು ತಲುಪಿದಾಗ ತೋರುಬೆರಳು ಮತ್ತು ಹೆಬ್ಬೆರಳನ್ನು ಅಥವಾ ನಡುಬೆರಳು ಮತ್ತು ತೋರುಬೆರಳನ್ನು ಬಾಯಿಯೊಳಕ್ಕೆ ತೂರಿಸಿ ದಾರ ಅಥವಾ ಕೆಥೆಟರ್ ಅನ್ನು ನಿಧಾನವಾಗಿ ಮತ್ತು ಮೆಲುವಾಗಿ ಬಾಯಿಯ ಮೂಲಕ ಹೊರಕ್ಕೆ ಎಳೆಯಿರಿ. ಕೆಲವು ಅಂಗುಲ ಗಳಷ್ಟು ದಾರವನ್ನು ಮೂಗಿನ ಹೊರಗೆ ನೇತಾಡುವಂತೆ ಬಿಡಿ.
  • ಪ್ರಾರಂಭದಲ್ಲಿ ಈ ಕ್ರಿಯೆಯು ವಾಕರಿಕೆಯನ್ನು ಉಂಟು ಮಾಡ ಬಹುದು. ಆದರೆ ಅಭ್ಯಾಸ ಮಾಡುತ್ತ ಹೋದಂತೆ ಇದು ಸುಲಭವಾಗುತ್ತದೆ.
  • ಸೂತ್ರದ ಎರಡು ತುದಿಗಳನ್ನು ಬೆರಳುಗಳಿಂದ ಹಿಡಿದುಕೊಳ್ಳಿ. ಬಹಳ ನಿಧಾನವಾಗಿ ಮತ್ತು ಮೃದುವಾಗಿ ಹಿಂದಕ್ಕೂ ಮುಂದಕ್ಕೂ ಎಳೆಯಿರಿ.
  • ಮೊದಲ ಸಲ ಅಭ್ಯಾಸ ಮಾಡುವಾಗ 12ರಿಂದ 15 ಬಾರಿ ಮಾತ್ರ ಮಾಡಿ.
  • ಸೂತ್ರವನ್ನು ನಿಧಾನವಾಗಿ ಬಾಯಿಯಿಂದ ಹೊರಗೆಳೆಯಿರಿ. ಇನ್ನೊಂದು ಹೊಳ್ಳೆಯಿಂದ ಈ ಕ್ರಿಯೆಯನ್ನು ಪುನರಾವರ್ತಿಸಿ.

ಉಸಿರಾಟ: ಬಾಯಿಯ ಮೂಲಕ ಉಸಿರಾಟ ಮಾಡಿ.

ಅವಧಿ: ಕೆಥೆಟರ್ ಬಳಸಿದಾಗ ಅಭ್ಯಾಸವನ್ನು ಪೂರ್ಣಗೊಳಿಸಲು 5 ನಿಮಿಷಕ್ಕೂ ಕಡಿಮೆ ಕಾಲ ಸಾಕು. ಹತ್ತಿಯ ದಾರವನ್ನು ಬಳಸಿದಾಗ ಸುಮಾರು 10 ನಿಮಿಷ ಬೇಕು. ಹಲವಾರು ದಿನಗಳಿಗೊಮ್ಮೆ ಅಥವಾ ವಾರಕ್ಕೊಮ್ಮೆ ಮಾಡಿದರೆ ಸಾಕು.

ಗಮನ: ದೇಹವನ್ನು ಸಡಿಲಿಸುವುದರ ಕಡೆಗೆ ಮತ್ತು ಸೂತ್ರ ಮೆಲುವಾಗಿ ಹಾಗೂ ನಿಧಾನವಾಗಿ ಚಲಿಸುವುದರ ಕಡೆಗೆ. ಎರಡು ಹುಬ್ಬುಗಳ ನಡುವೆ ಅಜ್ಞಾಚಕ್ರದ ಮೇಲೆ.

ಅನುಕ್ರಮಣಿಕೆ: ಸೂತ್ರನೇತಿಯನ್ನು ಜಲನೇತಿಗೆ ಮೊದಲು ಮಾಡಬೇಕು. ಹೀಗೆ ಮಾಡುವಾಗ ಮೂಗಿನಲ್ಲಿ ಸಂಚಯನ ಗೊಂಡಿದ್ದ ಕಶ್ಮಲ-ಶ್ಲೇಷ್ಮ ಗಳೆಲ್ಲವೂ ಜಲನೇತಿ ಮಾಡಿದಾಗ ಮೂಗಿನಿಂದಾಚೆ ಬರುತ್ತದೆ.

ಮುನ್ನೆಚ್ಚರಿಕೆ: ಯಾವುದೇ ಸಂದರ್ಭದಲ್ಲಿ ಇದನ್ನು ಒರಟಾಗಿ ಮಾಡಬಾರದು. ಸೂತ್ರ ಮೂಗಿನೊಳಗೆ ಹೋಗದಿದ್ದರೆ ಅನುಭವೀ ಯೋಗ ಶಿಕ್ಷಕರೊಂದಿಗೆ ಈ ಬಗ್ಗೆ ಸಮಾಲೋಚಿಸಿ.

ವಿಧಿ ನಿಷೇಧಗಳು: ದೀರ್ಘಕಾಲದಿಂದ ಮೂಗಿನಲ್ಲಿ ರಕ್ತಸ್ರಾವ ವಿರುವಂಥವರು ಸೂತ್ರನೇತಿಯನ್ನು ಮಾಡಬಾರದು. ಮೂಗಿನ ಹುಣ್ಣು, ಪಾಲಿಪ್ಸ್ ಇರುವವರು ಯೋಗ ಪರಿಣಿತರ ಅಥವಾ ಆಯುರ್ವೆದ ವೈದ್ಯರ ಸಲಹೆ ಪಡೆಯಬೇಕು.

ಪ್ರಯೋಜನಗಳು: ಇದು ಮೂಗಿನ ಹೊಳ್ಳೆಗಳ ಮಧ್ಯಪಟಲ ಅಥವಾ ನಡುತಡೆಯ ಕೊಂಕನ್ನು ಸರಿಪಡಿಸಬಹುದು. ಡೊಂಕುಮೂಳೆ ಅಥವಾ ದುರ್ವಂಸದ ಬೆಳವಣಿಗೆಯ ಕಾರಣದಿಂದ ಸರಾಗವಾದ ಹರಿವು ಸಾಧ್ಯವಿಲ್ಲದಿದ್ದರೆ, ಸೂತ್ರನೇತಿ ಮಾಡುವಾಗ ಉಂಟಾಗುವ ತಿಕ್ಕಾಟದಿಂದ ಕೆಲವು ತಿಂಗಳುಗಳಲ್ಲಿ ಈ ಅಡಚಣೆಗಳು ಕಾಣೆಯಾಗುತ್ತವೆ.

ಅಭ್ಯಾಸ ಸೂಚನೆ: ಕೆಥೆಟರ್​ನ ಬಳಕೆ ಸುಲಭ ಮತ್ತು ಬೇಗನೆ ಆಗುವಂಥದ್ದಾದರೂ ಹತ್ತಿಯ ದಾರದಷ್ಟು ಚೆನ್ನಾಗಿ ಇದು ಮೂಗಿನ ಮಾರ್ಗಗಳನ್ನು ಸ್ವಚ್ಛಗೊಳಿಸುವುದಿಲ್ಲ.