ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಸೋಮವಾರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ಆಶೀರ್ವಾದ ಮಾಡಿದರು. ಮುಂದಿನ ದಿನಗಳಲ್ಲಿ ಉತ್ತಮ ನಾಯಕನಾಗಿ ಬೆಳೆಯುವಂತೆ ವಿಜಯೇಂದ್ರ ಅವರಿಗೆ ಹರಸಿದರು. ಸಿದ್ಧರಬೆಟ್ಟ ಮಠದ ಶ್ರೀಗಳು, ಬಿಎಸ್​ವೈ ಕುಟುಂಬಸ್ಥರು ಇದ್ದರು. 
ನ್ಯೂಸ್

ಬಿಜೆಪಿಯಲ್ಲಿ ನಿಗೂಢ ಬೆಳವಣಿಗೆ: ದೇವೇಗೌಡರ ನಿರ್ಧಾರ, ಯಡಿಯೂರಪ್ಪ ಹೆಜ್ಜೆ ಮೇಲೆ ಲೆಕ್ಕಾಚಾರ

Webdesk - Ravikanth

| ಮೃತ್ಯುಂಜಯ ಕಪಗಲ್ ಬೆಂಗಳೂರು

ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದ್ದರೂ ಮೂರು ಪ್ರಮುಖ ಪಕ್ಷಗಳು ಉತ್ಸಾಹದಿಂದ ತರಹೇವಾರಿ ತಾಲೀಮು ನಡೆಸಲಾರಂಭಿಸಿವೆ. ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ತಮ್ಮ ಕಾರ್ಯತಂತ್ರದ ಜತೆಗೆ ಆಡಳಿತಾರೂಢ ಬಿಜೆಪಿಗೆ ಚೆಕ್ ನೀಡುವ ಬಗ್ಗೆ ಗಂಭೀರ ಚಿಂತನ-ಮಂಥನದಲ್ಲಿ ಮಗ್ನವಾಗಿವೆ. ಈ ನಡುವೆ ಆಡಳಿತಾರೂಢ ಬಿಜೆಪಿಯಲ್ಲಿ ನಿಗೂಢ ಬೆಳವಣಿಗೆಗಳಾಗುತ್ತಿವೆ. ಅಲ್ಲದೆ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ‘ರಹಸ್ಯ ಕಾರ್ಯಸೂಚಿ’ಗೆ ಇಂಬು ನೀಡಿದೆ. ಪಕ್ಷದ ವರಿಷ್ಠರು ಹಾಗೂ ರಾಜ್ಯ ನಾಯಕರ ನಿಲುವು ಸ್ಪಷ್ಟ ರೂಪ ಪಡೆದುಕೊಂಡಿಲ್ಲ. ಆದರೆ ಕೆಲವು ನಾಯಕರ ನಡೆ-ನುಡಿಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಅವಧಿಪೂರ್ವ ಕಾರ್ಯತಂತ್ರ: ವಿಧಾನಸಭೆ 2023ರ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್​ನಲ್ಲಿ ಏಕಕಾಲಕ್ಕೆ ಕಾರ್ಯತಂತ್ರ ಹೆಣೆಯುವ ಭೂಮಿಕೆ ಸಿದ್ಧವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಬೊಮ್ಮಾಯಿ ಸಿಎಂ ಆಗಿ ದೆಹಲಿ ಮೊದಲ ಪ್ರವಾಸದಲ್ಲಿ ಮುಂದಿನ ರಾಜಕೀಯ ನಿಲುವುಗಳ ಕುರಿತ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ. ಪ್ರಧಾನಿ ಮೋದಿ ಭೇಟಿ, ಮಾತುಕತೆಗೆ ಹೆಚ್ಚಿನ ಕಾಲಾವಕಾಶ ಸಿಗುವುದು ವಿರಳ. ಆದರೆ ಬೊಮ್ಮಾಯಿ ಜತೆಗೆ 40 ನಿಮಿಷಗಳ ಕಾಲ ರ್ಚಚಿಸಿರುವುದು ಹಲವು ತರ್ಕಕ್ಕೆ ಎಡೆಮಾಡಿಕೊಟ್ಟಿದೆ. ಆಡಳಿತ ನಿರ್ವಹಣೆ, ಸಚಿವ ಸಂಪುಟದ ಸಮನ್ವಯತೆ, ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿ ಹಾಗೂ ಮುಂದಿನ ರಾಜಕೀಯ ನಡೆಯ ಬಗ್ಗೆಯೂ ಮಾತುಕತೆಗಳಾಗಿವೆ. ಕರೊನಾ, ಪ್ರಕೃತಿ ವಿಕೋಪ, ಗೊಂದಲದಿಂದ ಹುಟ್ಟಿರಬಹುದಾದ ಆಡಳಿತ ವಿರೋಧಿ ಅಲೆಯನ್ನು ಸಕಾರಾತ್ಮಕ ಕ್ರಮಗಳ ಮೂಲಕ ಪರವಾಗಿ ಪರಿವರ್ತಿಸುವುದು ಮೊದಲ ಟಾಸ್ಕ್. ಹಾಗೆಯೇ ರಾಜಕೀಯ ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವುದು ಎರಡನೇ ಟಾಸ್ಕ್. ಇವೆರಡು ಯಶಸ್ವಿಯಾಗಿ ಪೂರೈಸಿದರೆ ಬೊಮ್ಮಾಯಿ ಭವಿಷ್ಯ, ನಾಯಕತ್ವ ಮತ್ತಷ್ಟು ಗಟ್ಟಿಯಾಗಲಿದೆ.

ರಹಸ್ಯ ಕಾರ್ಯಸೂಚಿ ಭಾಗವೆ ?: ಬೊಮ್ಮಾಯಿ ದೆಹಲಿಯಿಂದ ವಾಪಸ್ಸಾದ ಮರು ದಿನವೇ ಮಾಜಿ ಪ್ರಧಾನಿ, ಜೆಡಿಎಸ್​ನ ಅಗ್ರಗಣ್ಯ ನೇತಾರ ಎಚ್.ಡಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ರ್ಚಚಿಸಿದ್ದಾರೆ. ಗೌಡರ ರಾಜಕೀಯ ಗರಡಿಯಲ್ಲಿ ಪಳಗಿದ ಶಿಷ್ಯರಲ್ಲಿ ಒಬ್ಬರಾದ ಬೊಮ್ಮಾಯಿ ಅವರು ಗುರುಗಳ ಆಶೀರ್ವಾದ ಪಡೆಯಲು ಹೋಗಿದ್ದಾರೆ ಎಂದು ಮೇಲ್ನೋಟಕ್ಕೆ ಬಿಂಬಿಸಲಾಗುತ್ತಿದೆ. ಬಿಜೆಪಿ ವರಿಷ್ಠರು, ಚಿಂತಕರ ಚಾವಡಿ ರೂಪಿಸಿದ ರಹಸ್ಯ ಕಾರ್ಯಸೂಚಿ ಭಾಗವಾಗಿಯೇ ಗುರು- ಶಿಷ್ಯರ ಸಮಾಗಮವಾಯಿತು ಎಂದು ಮೂಲಗಳು ತಿಳಿಸಿವೆ. ‘ಜನತಾ ಪರಿವಾರ’ ಮೂಲದವರನ್ನು ಸಿಎಂ ಮಾಡಿದಿರಿ ಎಂದು ಸಂಘ-ಪರಿವಾರ, ಮೂಲ ಬಿಜೆಪಿಗರು ಮುನಿದಿರುವ ಹೊತ್ತಲ್ಲಿ ಬೊಮ್ಮಾಯಿ ದುಃಸಾಹಕ್ಕೆ ಕೈಹಾಕರು. ವರಿಷ್ಠರ ಆಣತಿಯಂತೆಯೇ ‘ಸಂದೇಶ ವಾಹಕ’ರಾಗಿ ಭೇಟಿಯಿತ್ತಿದ್ದಾರೆ. ದೇವೇಗೌಡರ ಜತೆಗಿನ ಮಾತುಕತೆ ಸಮಾಧಾನ ತಂದಿದೆ ಎಂಬ ಬೊಮ್ಮಾಯಿ ಹೇಳಿಕೆಯು ಗಮನಾರ್ಹ. ಉದ್ದೇಶ ಸಾರ್ಥಕವಾಗಿದೆ ಎಂದು ಅರ್ಥೈಸಲಾಗುತ್ತಿದೆ. ಬೊಮ್ಮಾಯಿ ಭೇಟಿ ಬಳಿಕ ಜೆಡಿಎಸ್ ವರಿಷ್ಠ ನೀಡಿದ ಹೇಳಿಕೆಯೂ ಇದಕ್ಕೆ ಪೂರಕವಾಗಿದೆ.

ದೇವೇಗೌಡರ ಅಚ್ಚರಿ ನಡೆ: ಅವಧಿ ಪೂರ್ವ ಚುನಾವಣೆಗೆ ಯಾರೂ ತಯಾರಿಲ್ಲವೆಂಬ ನೆಪವೊಡ್ಡಿದ ದೇವೇಗೌಡರು, ಸಂಕಷ್ಟದ ಪರಿಸ್ಥಿತಿಯಲ್ಲಿ ಬೆಂಬಲಿಸುತ್ತೇವೆ ಎಂದಿರುವುದು ಹುಬ್ಬೇರಿಸುವಂತೆ ಮಾಡಿದೆ. ತಕ್ಷಣದ, ಮುಂದಿನ ರಾಜಕೀಯ ಬೆಳವಣಿಗೆ ಸಂದರ್ಭದಲ್ಲಿ ಬಿಜೆಪಿ ಜತೆಗೆ ಜೆಡಿಎಸ್ ಮತ್ತೆ ಮೈತ್ರಿ ಸಾಧ್ಯತೆಗಳಿವೆ ಎಂದು ಗೌಡರ ಹೇಳಿಕೆಗೆ ತಾಳೆ ಹಾಕಲಾಗುತ್ತಿದೆ. ಆದರೆ ಗೌಡರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತೇ ಬೇರೆ, ಹಿಂದೆ ಎಸ್.ಆರ್. ಬೊಮ್ಮಾಯಿ ಸರ್ಕಾರವನ್ನು ಕಿತ್ತು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಲಿಂಗಾಯತ ಸಮುದಾಯ ಜೆಡಿಎಸ್​ನಿಂದ ದೂರವೇ ಇದೆ. ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿ ಇದೆ. ಅದನ್ನು ಹೋಗಲಾಡಿಸಿಕೊಳ್ಳಲು ಗೌಡರು ಬೊಮ್ಮಾಯಿಗೆ ಅಭಯ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಯಡಿಯೂರಪ್ಪ ತಂತ್ರಗಾರಿಕೆ: ಈ ನಡುವೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿ.ಎಸ್.ಯಡಿಯೂರಪ್ಪ ಹೊಸ ಅವತಾರ ಎತ್ತಲಿರುವುದು ಇನ್ನೊಂದು ರೀತಿಯ ಲೆಕ್ಕಾಚಾರಕ್ಕೆ ಅವಕಾಶ ಕಲ್ಪಿಸಿದೆ. ರಾಜ್ಯಪಾಲರ ಹುದ್ದೆ ಬೇಡ, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಗಣೇಶ ಚೌತಿ ಬಳಿಕ ವಾರಕ್ಕೊಂದು ಜಿಲ್ಲೆ ಪ್ರವಾಸ ಮಾಡುತ್ತೇನೆ ಎಂಬ ಹೇಳಿಕೆಯು ನಾಯಕರ ತಲೆ ಕೆಡಿಸಿದೆ. ಪಕ್ಷದ ಸಂಘಟನೆ ಚಟುವಟಿಕೆಗಳಲ್ಲಿ ಉತ್ಸುಕತೆಯಿಂದ ಪಾಲ್ಗೊಂಡಿರುವ ಕಾರ್ಯಕರ್ತರಲ್ಲೂ ‘ಏನೋ ನಡೆಯುತ್ತಿದೆ’ ಎಂಬ ಸಂದೇಹ ಹುಟ್ಟಿಕೊಂಡಿದೆ. ಸರ್ಕಾರ ಸುಭದ್ರವಾಗಿಡುವ ಜತೆಗೆ ಮತ್ತೊಮ್ಮೆ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡುವ ವ್ಯೂಹಾತ್ಮಕ ತಂತ್ರಗಾರಿಕೆ ರೂಪುಗೊಳ್ಳುತ್ತಿದೆ ಎಂಬುದು ಪಕ್ಷದ ಮೂಲಗಳ ತರ್ಕವಾಗಿದೆ.

ಆಕಾಂಕ್ಷಿಗಳ ಕೊನೇ ಸುತ್ತಿನ ಕಸರತ್ತು

ವಿವಿಧ ಕಾರಣಗಳಿಗಾಗಿ ಬಸವರಾಜ ಬೊಮ್ಮಾಯಿ ಸಂಪುಟ ಕುತೂಹಲದ ತುದಿಗಾಲ ಮೇಲೆ ನಿಲ್ಲಿಸಿದ್ದು, ಸಚಿವ ಪದವಿ ಆಕಾಂಕ್ಷಿಗಳು ಕೊನೇ ಸುತ್ತಿನ ಕಸರತ್ತು ಚುರುಕುಗೊಳಿಸಿದ್ದಾರೆ. ದೆಹಲಿಯಲ್ಲಿರುವ ಸಿಎಂ ಬೊಮ್ಮಾಯಿ ವರಿಷ್ಠರ ಭೇಟಿ, ಮಾತುಕತೆಯಲ್ಲಿ ಬ್ಯುಸಿಯಾಗಿದ್ದರೆ, ಮತ್ತೊಂದೆಡೆ ಕೆಲವು ಮಾಜಿ ಸಚಿವರು ಹಾಗೂ ಶಾಸಕರು ಪ್ರಭಾವಿಗಳ ಮನೆಗೆ ಸುತ್ತಾಡುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ.ಅರುಣಾ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿ ಪ್ರಬಲ ನಾಯಕರ ನಿಕಟವರ್ತಿಗಳ ಮುಖೇನ ಲಾಬಿ ನಡೆಸಿದ್ದಾರೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಶಾಸಕರಾದ ಆರಗ ಜ್ಞಾನೇಂದ್ರ, ದೊಡ್ಡನಗೌಡ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಬೆಂಬಲಿಗರು ಭೇಟಿಯಾಗಿ ವರಿಷ್ಠರಿಗೆ ಶಿಫಾರಸು ಮಾಡಲು ಕೇಳಿಕೊಂಡಿದ್ದಾರೆ. ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಮುಖಂಡರು ಬಿಎಸ್​ವೈಗೆ ಭೇಟಿಯಾಗಿ ತಮ್ಮ ಕೋರಿಕೆ ಮಂಡಿಸಿದ್ದಾರೆ. ಉಡುಪಿ ಜಿಲ್ಲೆ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್ ಹಾಗೂ ಸಾಬಣ್ಣ ತಳವಾರ್ ಪೈಕಿ ಇಬ್ಬರಿಗೆ ಪ್ರಾತಿನಿಧ್ಯ ಸಿಗಬೇಕು. ಹಿಂದುಳಿದ ವರ್ಗದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಸಮುದಾಯಕ್ಕೆ ಸೂಕ್ತ ಪ್ರಾಶಸ್ಱ ಸಿಕ್ಕಿಲ್ಲ. ಈ ಬಾರಿ ಕೊರತೆ ಸರಿದೂಗಿಸಲು ವಿನಂತಿಸಿದ್ದಾರೆ.